Revenue Facts

ಕಾವೇರಿ 2.0 ತಂತ್ರಾಂಶದಲ್ಲಿ ಅಧಿಕ ಲಾಭ : ರೂ.200 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹ.

ಕಾವೇರಿ 2.0 ತಂತ್ರಾಂಶದಲ್ಲಿ ಅಧಿಕ ಲಾಭ : ರೂ.200 ಕೋಟಿ ಹೆಚ್ಚುವರಿ ರಾಜಸ್ವ ಸಂಗ್ರಹ.

ಬೆಂಗಳೂರು : ಬೆಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾವೇರಿ 2.0 ತಂತ್ರಾಂಶ ಅಳವಡಿಕೆ ನಡುವೆಯೂ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಗಿಂತ ರೂ.200 ಕೋಟಿ ಹೆಚ್ಚು ರಾಜಸ್ವ ಸಂಗ್ರಹವಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

2004ರಲ್ಲಿ ಅಳವಡಿಸಿದ್ದ ಕಾವೇರಿ 1.0 ತಂತ್ರಾಂಶ ತುಂಬ ಹಳೆಯದಾದ ಕಾರಣಕ್ಕೆ ಅಪ್ ಗ್ರೇಡ್ ಮಾಡಲಾಗಿದೆ. ಕಾವೇರಿ 2.0ಗೆ ಅಪ್ಗ್ರೇಡ್ ಮಾಡಿ ವರ್ಷದ ಆರಂಭದಿಂದ ಹಂತ ಹಂತವಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಾರಿಗೆ ತರಲಾಗಿದೆ. ಇತ್ತೀಚೆಗೆ 256 ಉಪನೋಂದಣಿ ಕಚೇರಿಗಳಲ್ಲಿ ಸಂಪೂರ್ಣ ಹೊಸ ಸಾಫ್ಟ್ವೇರ್ನಲ್ಲಿಯೇ ದೈನಂದಿನ ಕೆಲಸ ಕಾರ್ಯಗಳು ನಡೆಯುತ್ತಿವೆ. ಕಾವೇರಿ 2.0 ತಂತ್ರಾಂಶದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಎಲ್ಲವನ್ನೂ ಸರಿಪಡಿಸಿಕೊಂಡು ಸಬ್ ರಿಜಿಸ್ಟ್ರಾರ್ ಗಳು ನಿಗದಿಗಿಂತ 200 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಗಸೂಚಿ ದರದ ಮೇಲೆ ಶೇ.10 ರಿಯಾಯಿತಿ ನೀಡಲಾಗಿತ್ತು. ಆದರೆ ಪ್ರಸ್ತುತ ಸಾಲಿನಲ್ಲಿ ಯಾವುದೇ ರಿಯಾಯಿತಿ ಇಲ್ಲದಿದ್ದರೂ ಹೊಸ ತಂತಾಜ್ಞಾನವನ್ನು ಅಳವಡಿಸಿದ್ದರೂ, ವಿಧಾನಸಭಾ ಚುನಾವಣೆ ನಡೆದಿದ್ದರೂ 200 ಕೋಟಿ ರೂ. ಹೆಚ್ಚು ರಾಜಸ್ಥ ಸಂಗ್ರಹವಾಗಿದೆ. ಸದ್ಯ ಆಷಾಢ ಮಾಸದಲ್ಲಿ ದಸ್ತಾವೇಜುಗಳ ನೋಂದಣಿ ಕಡಿಮೆಯಾಗುವುದನ್ನು ಗಮನಿಸಲಾಗಿದೆ.

ಜೂನ್ 19ರಿಂದ ಆಷಾಡ ಮಾಸ ಪ್ರಾರಂಭವಾಗಿದೆ. ಈ ವೇಳೆ ಕಡಿಮೆ ಆಗುವ ಸಾಧ್ಯತೆಗಳಿವೆ. ಆದರೂ, ಕಾವೇರಿ 2.0 ತಂತ್ರಾಂಶದಲ್ಲಿ ಎದುರಾಗುವ ಸರ್ವರ್ ಸಮಸ್ಯೆ, ರಾಜಸ್ವ ಪಾವತಿ ವಿಳಂಬ, ಲಾಗಿನ್ ಆಗುವಲ್ಲಿ ತೊಂದರೆ, ಇಸಿ ವ್ಯವಸ್ಥೆಯಲ್ಲಿ ಸಮಸ್ಯೆ ಸೇರಿ ಸಾಕಷ್ಟು ತೊಡಕುಗಳು ಇನ್ನೂ ನಿಂತಿಲ್ಲ.

ಈ ಎಲ್ಲವನ್ನು ಸರಿಪಡಿಸಬೇಕಾಗಿದೆ. ಬಲಿಷ್ಠ ತಾಂತ್ರಿಕ ಸಿಬ್ಬಂದಿ ತಂಡ ನೇಮಕ ಮಾಡಿದರೆ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚು ಹೆಚ್ಚು ಸಂಗ್ರಹವಾಗಿ ಸರ್ಕಾರಕ್ಕೆ ಆದಾಯ ತಂದು ಕೊಡಲಿದೆ. ಜನರಿಗೂ ಸುಲಭವಾಗಿ ಸೇವೆ ಸಿಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾದರಿ ಕಚೇರಿ ವಿಫಲ

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾಯುವ ಪ್ರದೇಶ, ವಿಶ್ರಾಂತಿ ಕೊಠಡಿ, ಆಹಾರ ನೀಡುವ ಪ್ರದೇಶ, ರಾಂಪ್, ಲಿಫ್ಟ್ ಇತ್ಯಾದಿ ಸೌಲಭ್ಯಗಳು ಇರಬೇಕೆಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಸಾಕಷ್ಟು ಕಚೇರಿಗಳಲ್ಲಿ ಇನ್ನೂ ಮೂಲಸೌಕರ್ಯಗಳು ಇಲ್ಲವಾಗಿದೆ. ಕಟ್ಟಡ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿ ಆಯುಕ್ತರು ಮೀನಮೇಷ ಏಣಿಸುತ್ತಿದ್ದಾರೆ. ಆದರೆ, ಸಾರ್ವಜನಿಕರು ಮಾತ್ರ ತೊಂದರೆ ಎದುರಿಸಬೇಕಾಗಿದೆ. ವಯಸ್ಸಾದವರು ಲಿಫ್ಟ್ ಇಲ್ಲದೆ ಮತ್ತು ಮಧುಮೇಹ ಇರುವವರೂ ಶೌಚಗೃಹ ಇಲ್ಲದೆ ಪರದಾಡಬೇಕಾಗಿದೆ.

ರಾಜಸ್ವ ಸಂಗ್ರಹ (ಕೋಟಿ ರೂ.ನಲ್ಲಿ)
ತಿಂಗಳು 2022-23 2023-24
ಏಪ್ರಿಲ್ 1276 1273
ಮೇ 1224 1352
ಜೂನ್-16 731 800
ಒಟ್ಟು 3221 3425

Exit mobile version