ಬೆಂಗಳೂರು26;ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು,ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ನೌಕರರಿಗೆ ತಲಾ ಐದು ಸಾವಿರ ರೂ. ಪ್ರೋತ್ಸಾಹಧನ ನೀಡಲು ಸರ್ಕಾರ ಮುಂದಾಗಿದೆ.ರಾಜ್ಯ ಸರ್ಕಾರಿ ನೌಕರರು ಮುಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ಪಡೆಯಲು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ (ಸಿಎಲ್‍ಟಿ ಪರೀಕ್ಷೆಯಲ್ಲಿ) ಉತ್ತೀರ್ಣರಾಗಬೇಕೆಂದು ಈ ಹಿಂದೆ ಕಡ್ಡಾಯಗೊಳಿಸಲಾಗಿತ್ತು. ಇದೀಗ ಪ್ರೋತ್ಸಾಹ ಧನ ನೀಡುವ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಸಿವಿಲ್ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು -2012 ಜಾರಿಗೆ ಬಂದ 22-03-2012ರಂದು ಸೇವೆಯಲ್ಲಿದ್ದು, ದಿನಾಂಕ 17-04-2021 ರೊಳಗೆ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅರ್ಹ ಸೇವಾ ನಿರತ ನೌಕರರಿಗೆ ಈ ಪ್ರೋತ್ಸಾಹ ಧನ ದೊರೆಯಲಿದೆ.
ಇದೀಗ ರಾಜ್ಯ ಸರ್ಕಾರ ನೌಕರರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು,ನೌಕರರು ಹಾಜರುಪಡಿಸುವ ಡಿಜಿಟಲ್ ಸಹಿ ಹೊಂದಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷಾ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಪ್ರೋತ್ಸಾಹ ಧನವನ್ನು ಸರ್ಕಾರಿ ನೌಕರರು ಪಡೆಯುವ ವೇತನದಲ್ಲಿ ಸೇರಿಸಿ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಬಳಕೆಯ ಸಾಮಾನ್ಯ ಜ್ಞಾನವನ್ನು ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ನಡೆಸಲಾಯಿತು. ನೌಕರರಿಗೆ ನೀಡಲ್ಪಡುವ ಪ್ರಮಾಣಪತ್ರದ ನಮೂನೆ ಅಂತಿಮಗೊಳ್ಳದ ಹಿನ್ನೆಲೆಯಲ್ಲಿ ಪ್ರೋತ್ಸಾಹ ಧನ ನೀಡಲು ತಡೆ ನೀಡಲಾಗಿತ್ತು. ಇದೀಗ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿರುವುದರಿಂದ ಪ್ರೋತ್ಸಾಹಧನ ನೀಡಲು ಕ್ರಮ ವಹಿಸಲಾಗಿದೆ.
ನೇರ ನೇಮಕಾತಿ ಹೊಂದಿರುವ ಮತ್ತು ಸೇವಾನಿರತ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅಂಕ ಪಡೆದು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅನುತ್ತೀರ್ಣರಾಗುವ ನೌಕರರು ಪರಿವೀಕ್ಷಣಾ ಅವಧಿ, ಬಡ್ತಿ ಹಾಗೂ ವಾರ್ಷಿಕ ವೇತನ ಹೆಚ್ಚಳ ಪಡೆಯಲು ಅನರ್ಹತೆ ಹೊಂದುತ್ತಾರೆ. ಕರ್ನಾಟಕ ನಾಗರಿಕ ಸೇವಾ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು 1(3)ರಲ್ಲಿ ನಿರ್ದಿಷ್ಟಪಡಿಸಿರುವ ಹುದ್ದೆಗಳನ್ನು ಹೊರತುಪಡಿಸಿ, ಇನ್ನಿತರ ಎಲ್ಲ ಅಭ್ಯರ್ಥಿಗಳಿಗೆ ಈ ಪರೀಕ್ಷೆ ಕಡ್ಡಾಯ. ರಾಜ್ಯ ಸರ್ಕಾರ ಅನುಮೋದಿಸಿರುವ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ.