Revenue Facts

ಸರ್ಕಾರದಿಂದ ಗುಡ್‌ ನ್ಯೂಸ್‌:ಗ್ರಾಮಲೆಕ್ಕಿಗ ಇನ್ಮುಂದೆ ಗ್ರಾಮ ಆಡಳಿತ ಅಧಿಕಾರಿ

ಸರ್ಕಾರದಿಂದ ಗುಡ್‌ ನ್ಯೂಸ್‌:ಗ್ರಾಮಲೆಕ್ಕಿಗ ಇನ್ಮುಂದೆ ಗ್ರಾಮ ಆಡಳಿತ ಅಧಿಕಾರಿ

ಬೆಂಗಳೂರು, ಫೆಬ್ರವರಿ27;ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರ ಹುದ್ದೆಯ ವೇತನ ಶ್ರೇಣಿ, ನೇಮಕಾತಿ ವಿಧಾನ ಅಥವಾ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಯಾವುದೆ ಬದಲಾವಣೆ ಇಲ್ಲದೆ ಗ್ರಾಮಲೆಕ್ಕಿಗರು ಎಂಬ ಪದನಾಮವನ್ನು ‘ಗ್ರಾಮ ಆಡಳಿತ ಅಧಿಕಾರಿ’ ಎಂದು ಮರು ಪದನಾಮೀಕರಿಸಿ ಸರಕಾರ ಆದೇಶ ಹೊರಡಿಸಿದೆ.ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿಯೂ ಆದೇಶಿಸಲಾಗಿದೆ. ಹುದ್ದೆಯ ಪದನಾಮ ಮಾತ್ರ ಬದಲಾವಣೆಯಾಗಿದೆ. ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಕಂದಾಯ ಸಚಿವರ ಟಿಪ್ಪಣಿ, ಪ್ರಾದೇಶಿಕ ಆಯುಕ್ತರು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗ ಇವರ 14-10-2022ರ ಪತ್ರ ಸಂಖ್ಯೆಯ ಅನ್ವಯ ಗ್ರಾಮಲೆಕ್ಕಿಗ ಹುದ್ದೆಯನ್ನು ಗ್ರಾಮ ಆಡಳಿತ ಅಕಾರಿ ಎಂದು ಬದಲಾವಣೆ ಮಾಡಲಾಗಿದೆ.ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಸೇವೆಗಳು- 2) ಹರೀಶ್ ಈ ಕುರಿತು ಆದೇಶ ಹೊರಡಿಸಿದ್ದಾರೆ.ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗೆ ಅನ್ವಯಿಸುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕ ಕ್ರಮ ವಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಚಿವರಿಂದ ಸ್ವೀಕೃತವಾದ ಟಿಪ್ಪಣಿಯಲ್ಲಿ ಕಂದಾಯ ಇಲಾಖೆಯ ಇನ್ನು ಮುಂದೆ “ಗ್ರಾಮ ಲೆಕ್ಕಿಗ’ ಹುದ್ದೆಯನ್ನು “ಗ್ರಾಮ ಆಡಳಿತ ಅಧಿಕಾರಿ’ ಎಂದು ಬದಲಿಸಲಾಗಿದ್ದು, ಈ ಬದಲಾವಣೆಯ ಪ್ರಸ್ತಾವನೆ ಯನ್ನು ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮ ಲೆಕ್ಕಿಗರ ಹುದ್ದೆಗೆ ಅನ್ವಯವಾಗುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ.ಅದರಂತೆ, ಎಲ್ಲಾ ಪ್ರಾದೇಶಿಕ ಆಯುಕ್ತರಿಗೆ ಪದನಾಮವನ್ನು ಬದಲಾವಣೆ ಮಾಡುವ ಸಂಬಂಧ ಅಭಿಪ್ರಾಯ ನೀಡುವಂತೆ ಕೋರಲಾಗಿತ್ತು. ನಾಲ್ಕು ಪ್ರಾದೇಶಿಕ ಆಯುಕ್ತರುಗಳು ಗ್ರಾಮಲೆಕ್ಕಿಗರು ಎಂಬ ಪದನಾಮವನ್ನು ಗ್ರಾಮ ಆಡಳಿತ ಅಧಿಕಾರಿ ಎಂದು ಬದಲಾಯಿಸಬಹುದೆಂದು ವರದಿ ಸಲ್ಲಿಸಿದ್ದರು.

ಗ್ರಾಮ ಲೆಕ್ಕಿಗ ಕಂದಾಯ ಇಲಾಖೆಯ ಯೋಜನೆಗಳನ್ನು ಗ್ರಾಮ ಮಟ್ಟಕ್ಕೆ ತಲುಪಿಸುವ ಮಹತ್ತರವಾದ ಹುದ್ದೆಯಾಗಿದೆ. ಈ ಹುದ್ದೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಗ್ರಾಮ ಮಟ್ಟದಲ್ಲಿರುವ ಸರ್ಕಾರದ ಅಧಿಕಾರಿ ಎಂದರೆ ಗ್ರಾಮ ಲೆಕ್ಕಿಗ. ಸದರಿ ಪದನಾಮ ಬದಲಾವಣೆಯ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಅನ್ವಯಿಸುವಂತೆ ಸೂಕ್ತ ತಿದ್ದುಪಡಿ ತರಲು ಪ್ರತ್ಯೇಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ

ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಬಗ್ಗೆ ಸಲಹೆ ನೀಡಲು ಸಲಹಾ ಸಮಿತಿ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ. ಈ ಸಮಿತಿಯ ವರದಿ ಆಧರಿಸಿ ನೇಮಕಾತಿ ನಿಯಮದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸದ್ಯ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದವರನ್ನು ಗ್ರಾಮ ಲೆಕ್ಕಿಗರಾಗಿ ನೇಮಕಾತಿ ಮಾಡಲಾಗುತ್ತಿದೆ. ಹೆಚ್ಚಿನ ವಿದ್ಯಾರ್ಹತೆಯನ್ನು ನಿಗದಿ ಮಾಡಿಲ್ಲ.ಗ್ರಾಮ ಲೆಕ್ಕಿಗರ ಹುದ್ದೆಯನ್ನು ಪ್ರಸ್ತುತ ಕರ್ನಾಟಕ ಜನರಲ್ ಸರ್ವೀಸಸ್ (ತಿದ್ದುಪಡಿ) ನಿಯಮಗಳು 2008 ಮತ್ತು 2009 ಹಾಗೂ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಮಾಡಲಾಗುತ್ತಿದೆ. ಜಿಲ್ಲಾಕಾರಿಗಳ ನೇತೃತ್ವದಲ್ಲಿ ರಚನೆ ಮಾಡಿರುವ ಸಮಿತಿಯು ಈ ನೇಮಕಾತಿಯನ್ನು ನೋಡಿಕೊಳ್ಳುತ್ತದೆ. ಜಿಲ್ಲಾಕಾರಿಗಳ ಕಚೇರಿ ಮೂಲಕವೇ ನೇಮಕಾತಿ ಅಧಿಸೂಚನೆ ಪ್ರಕಟವಾಗುತ್ತದೆ.

Exit mobile version