ಬೆಂಗಳೂರು, ಮೇ. 09 : ಈಗಂತೂ ಪ್ರಪಂಚದಲ್ಲಿ ತಿನ್ನುವುದರಿಂದ ಹಿಡಿದು ಪ್ರತಿಯೊಂದು ವಸ್ತು ಕೂಡ ನಕಲಿ ಸಿಗುತ್ತದೆ. ಹೀಗಿರುವಾಗ ಇಲ್ಲೊಂದು ಜಾಲತಾಣವೂ ನಕಲಿಯಾಗಿದ್ದು, ಇದೀಗ ಈ ಸುದ್ದಿ ವೈರಲ್ ಆಗಿದೆ. ಪೊಲೀಸ್ ನೇಮಕಾತಿ ವಿಭಾಗದ ಹೆಸರಲ್ಲಿ ನಕಲಿ ಜಾಲತಾಣ ಸೃಷ್ಟಿಸಲಾಗಿದೆ. ಇದರಲ್ಲಿ ಅಭ್ಯರ್ಥಿಗಳನ್ನು ವಂಚನೆ ಮಾಡಲಾಗಿದೆ. ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಇಲಾಖೆಯಲ್ಲಿ 25 ತಾಂತ್ರಿಕ ಹುದ್ದೆಗಳು ಖಾಲಿ ಇದೆ. ಇದಕ್ಕೆ ಅರ್ಜಿ ಸಲ್ಲಿಸಬಹುದು. ಹೀಗಂತ ನಕಲಿ ವೆಬ್ ಸೈಟ್ ಲಿಂಕ್ ಅನ್ನು ಜಾಹೀರಾತು ನೀಡಲಾಗಿತ್ತು. ಇದನ್ನು ನೋಡಿದವರು ವೆಬ್ ಸೈಟ್ ಗೆ ತೆರಳಿ ಅರ್ಜಿ ಹಾಕಿದ್ದರು. ಹೊರ ದೇಶದ ವಿಳಾಸ ಬಳಸಿಕೊಂಡು ನಕಲಿ ವೆಬ್ ಸೈಟ್ ಅನ್ನು ತಯಾರಿಸಲಾಗಿದೆ. www.ksprecruitment.co.in ಈ ವೆಬ್ ಸೈಟ್ ನಲ್ಲಿ ಅರ್ಜಿ ತುಂಬಿಸಿದ ಬಳಿಕ 2000 ರೂಪಾಯಿ ಅನ್ನು ಪಾವತಿ ಮಾಡುವಂತೆ ಕೇಳಲಾಗಿದೆ. ಇದರಿಂದ ಅನುಮಾನಗೊಂಡವರು ಹಣ ಪಾವತಿ ಮಾಡಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ನಿಷ್ಕ್ರಿಯಗೊಳಿಸಿದ್ದಾರೆ.
ಜಾಲತಾಣದಲ್ಲಿ ಲಿಂಕ್ ಮಾಡಿದ್ದ ಫೋನ್ ನಂಬರ್ ಅನ್ನು ಆಧರಿಸಿ ಒಬ್ಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಆ ವ್ಯಕ್ತಿಯ ಹೆಸರಲ್ಲಿ ಆರೋಪಿಗಳು ಸಿಮ್ ಪಡೆದುರುವುದು ತಿಳಿದು ಬಂದಿದೆ. ತನಿಖೆ ಮುಂದುವರೆದಿದ್ದು, ಇದೇ ರೀತಿಯಲ್ಲಿ ಉಡುಪಿ ಬಂದರಿನಲ್ಲೂ ನಡೆದಿದೆ. ನಕಲಿ ನೇಮಕಾತಿ ಜಾಲತಾಣ ಸೃಷ್ಟಿ ಮಾಡಿ ಉಡುಪಿಯ ಬಂದರಿನಲ್ಲಿ ಕೆಲಸ ಖಾಲಿ ಇದೆ ಎಂದು ಜಾಹೀರಾತು ನೀಡಲಾಗಿದೆ. ಇದೆರಡೂ ಕೂಡ ಒಂದೇ ಗುಂಪಿನ ಆರೋಪಿಗಳು ಕೃತ್ಯವೆಸಗಿದ್ದಾರೆ ಎಂದು ಅಂದಾಜಿಸಲಾಗಿದೆ.