Revenue Facts

Exchange of property: ಆಸ್ತಿಗೆ ಪ್ರತಿಯಾಗಿ ಆಸ್ತಿ ಕೊಟ್ಟು ಸೇಲ್ ಡೀಡ್ ಮಾಡಿಸಬಹುದೇ ?

Exchange of property: ಆಸ್ತಿಗೆ ಪ್ರತಿಯಾಗಿ ಆಸ್ತಿ ಕೊಟ್ಟು  ಸೇಲ್ ಡೀಡ್ ಮಾಡಿಸಬಹುದೇ ?

#exchange #Property, #Exchange deed # transfer of property act 1882

ಬೆಂಗಳೂರು, ನ. 02: ಪ್ರಾಚೀನ ಭಾರತದಲ್ಲಿ ರಾಗಿ ಕೊಟ್ಟು ಭತ್ತ ಪಡೆಯುವ ಬದಲಿ ವ್ಯವಸ್ಥೆ ಇತ್ತು. ಆದರೆ ಅಧುನಿಕ ಭಾರತದಲ್ಲಿ ಎಲ್ಲಾ ವಸ್ತು ಸೇವೆಗಳಿಗೆ ಹಣದ ಮೌಲ್ಯ ಕೊಟ್ಟು ಮಾರಾಟ- ಖರೀದಿ ಪ್ರಕ್ರಿಯೆ ನಡೆಸಲಾಗುತ್ತದೆ. ಆಸ್ತಿ ವಿಚಾರದಲ್ಲಿ ಒಬ್ಬರಿಗೆ ಆಸ್ತಿಯನ್ನು ಕೊಟ್ಟು ಅದಕ್ಕೆ ಬದಲಿಯಾಗಿ ಹಣದ ಬದಲಿಗೆ ಆಸ್ತಿಯನ್ನು ಕೊಡಬಹುದು. ಹೀಗೆ ಆಸ್ತಿ ಅದಲು- ಬದಲು ಮಾಡಿಕೊಂಡು ಮಾಡುವ ವ್ಯವಹಾರಕ್ಕೆ ಕಾನೂನಿನಲ್ಲಿ ಮಾನ್ಯತೆ ಇದೆಯೇ ? ಈ ಕುರಿತು ಆಸ್ತಿ ವರ್ಗಾವಣೆ ಕಾನೂನು `1882 ಏನು ಹೇಳುತ್ತದೆ ? ಈ ಕುರಿತ ಸಮಗ್ರ ಕಾನೂನು ಮಾಹಿತಿ ಇಲ್ಲಿ ನೀಡಲಾಗಿದೆ.

ಇಂದು ಸಾಮಾನ್ಯವಾಗಿ ಒಂದು ಸ್ಥಿರಾಸ್ತಿ ಖರೀದಿ ಮಾಡಿದರೆ ಅದಕ್ಕೆ ಒಂದು ಬೆಲೆ ಕಟ್ಟುತ್ತೇವೆ. ನಿಗದಿತ ಮೊತ್ತಕ್ಕೆ ಖರೀದಿಸಿ ಸೇಲ್ ಡೀಡ್ ಮಾಡಿಸಿಕೊಳ್ಳುವ ಪರಿಪಾಠವಿದೆ. ಅದರೆ ಕಾನೂನಿನಲ್ಲಿ ಆಸ್ತಿಯನ್ನು ಆಸ್ತಿ ಕೊಟ್ಟು ಖರೀದಿಸಲು ಅವಕಾಶವಿದೆ. ಭಾರತದಲ್ಲಿ ಆಸ್ತಿ ವರ್ಗಾವಣೆ ಕಾನೂನು 1882 ಸೆಕ್ಷನ್ 118 ಈ ಕುರಿತು ಹೇಳುತ್ತದೆ.

ಭಾರತದಲ್ಲಿ ಆಸ್ತಿ ವರ್ಗಾವಣೆ ಕಾನೂನು ಜಾರಿಗೆ ಬರುವ ಮುನ್ನ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಆಸ್ತಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿತ್ತು. 1882 ರಲ್ಲಿ ಆಸ್ತಿ ವರ್ಗಾವಣೆ ಕಾನೂನು ಜಾರಿಗೆ ಬಂದ ಬಳಿಕ ಸ್ಥಿರಾಸ್ತಿ ಮಾರಾಟ- ನೋಂದಣಿ ಪ್ರಕ್ರಿಯೆಗಳ ಬಗ್ಗೆ ವಿವರಿಸಲಾಗಿದೆ.

ಆಸ್ತಿ ಮಾರಾಟದ ವಿಧಗಳು:

ಸೇಲ್ : ಒಂದು ಸ್ಥಿರಾಸ್ತಿಯನ್ನು ನಿಗದಿತ ಬೆಲೆಗೆ ಮಾರಾಟ ಮಾಡುವ ಪ್ರಕ್ರಿಯೆ. ಇಲ್ಲಿ ಒಬ್ಬ ಮಾರಾಟಗಾರ ಮತ್ತು ಒಬ್ಬ ಖರೀದಿದಾರ ಇರುತ್ತಾನೆ. ಮಾರಾಟಗಾರ ತನ್ನ ಆಸ್ತಿಯನ್ನು ಹಣದ ಮೌಲ್ಯ ನಿಗದಿ ಪಡಿಸಿ ಅದರ ಮೊತ್ತಕ್ಕೆ ಮಾರಾಟ ಮಾಡಿ ಆಸ್ತಿ ಹಕ್ಕುಗಳನ್ನು ಖರೀದಿದಾರನಿಗೆ ವರ್ಗಾವಣೆ ಮಾಡುವುದನ್ನು ಸೇಲ್ ಡೀಡ್ ಎಂದು ಕರೆಯುತ್ತೇವೆ.

ಅಡಮಾನ : ಒಂದು ಆಸ್ತಿಯನ್ನು ಸಾಲಕ್ಕೆ ಭದ್ರತೆಗಾಗಿ ನೀಡಿ, ಸಾಲ ನೀಡದಿದ್ದ ಪಕ್ಷದಲ್ಲಿ ಅಡಮಾನ ಇಟ್ಟ ಆಸ್ತಿಯನ್ನು ಸಾಲದಾತ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದನ್ನು ಮಾರ್ಟ್‌ಗೇಜ್ ಅಥವಾ ಅಡಮಾನ ಎಂದು ಕರೆಯುತ್ತೇವೆ. ಒಂದು ಸ್ಥಿರಾಸ್ತಿಗೆ ಸಾಲ ಪಡೆದ ವ್ಯಕ್ತಿ ಸಾಲ ತೀರಿಸದ ಪಕ್ಷದಲ್ಲಿ ಅಡಮಾನ ಇಟ್ಟಿರುವ ಆಸ್ತಿಯನ್ನು ಸಾಲದಾತ ತನ್ನ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಸಿಕೊಳ್ಳುವ ಪ್ರಕ್ರಿಯೆ ಇದಾಗಿದೆ. ಸಾಮಾನ್ಯವಾಗಿ ಸ್ಥಿರಾಸ್ತಿ ಮೇಲೆ ಸಾಲ ಪಡೆದಿದ್ದರೆ, ಸಾಲ ತೀರಿಸದೇ ಇದ್ದರೆ ಬ್ಯಾಂಕುಗಳು ಆ ಆಸ್ತಿಯ ಹಕ್ಕುಗಳನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವುದನ್ನು ಗಮನಿಸಬಹುದು. ಇದರ ಬಗ್ಗೆ ಅಸ್ತಿ ವರ್ಗಾವಣೆ ಕಾಯ್ದೆ 1882 ಸೆಕ್ಷನ್ 58 ರಲ್ಲಿ ವಿವರಿಸಲಾಗಿದೆ.

ಲೀಸ್‌ : ಒಂದು ಆಸ್ತಿಯನ್ನು ಅದರ ಮಾಲೀಕ ನಿಗದಿತ ಅವಧಿಗೆ ಇನ್ನೊಬ್ಬ ವ್ಯಕ್ತಿಗೆ ನೀಡಿ ಮಾಡಿಕೊಳ್ಳುವ ಕರಾರಿಗೆ ಲೀಸ್ ಎಂದು ಕರೆಯುತ್ತೇವೆ. ಇಲ್ಲಿ ಆಸ್ತಿಯ ಮಾರಾಟದ ಹಕ್ಕುಗಳು ಲೀಸ್ ಪಡೆದವನಿಗೆ ಇರುವುದಿಲ್ಲ. ಆದರೆ ಆಸ್ತಿಯನ್ನು ಬಳಕೆ ಮಾಡಲು, ಉಪಯೋಗಿಸುವ ಹಕ್ಕುಗಳನ್ನು ಮಾತ್ರ ಆಸ್ತಿಯ ಮಾಲೀಕ ವರ್ಗಾವಣೆ ಮಾಡಿರುತ್ತಾನೆ. ಈ ಹಕ್ಕುಗಳು ಸಹ ಕರಾರಿನ ಒಪ್ಪಂದಕ್ಕೆ ಅನುಗುಣವಾಗಿ ಸೀಮಿತ ಅವಧಿಗೆ ಇರುತ್ತದೆ. ಇಲ್ಲಿ ಆಸ್ತಿ ಬಳಕೆ ಹಕ್ಕು ವರ್ಗಾವಣೆಯಾಗಬಹುದು, ಮಾಲೀಕತ್ವದ ಹಕ್ಕು ವರ್ಗಾವಣೆ ಆಗಿರುವುದಿಲ್ಲ. ಈ ಕುರಿತು ಕಾಯ್ದೆಯ ಸೆಕ್ಷನ್ 105 ರಿಂದ 117 ರ ವರೆಗೆ ವಿವರಿಸುತ್ತದೆ.

ಬದಲಿ ಆಸ್ತಿ : ಒಂದು ಆಸ್ತಿಯನ್ನು ಮತ್ತೊಂದು ಆಸ್ತಿಗೆ ಬದಲಿಯಾಗಿ ನೀಡಿ ನೋಂದಣಿ ಮಾಡಿಸಿದರೆ ಅದನ್ನು exchange of Land ಎಂದು ಕರೆಯುತ್ತೇವೆ. ಇದಕ್ಕೆ ಆಸ್ತಿ ವರ್ಗಾವಣೆ ಕಾನೂನು 1882 ರಲ್ಲಿ ಅವಕಾಶ ನೀಡಿದ್ದು, ಸೆಕ್ಷನ್ 118 ಇದರ ಬಗ್ಗೆ ಹೇಳುತ್ತದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಸಮ್ಮತಿ ಮೇರೆಗೆ ಒಂದು ಆಸ್ತಿಯನ್ನು ಕೊಟ್ಟು ಅದಕ್ಕೆ ಬದಲಿಯಾಗಿ ಹಣದ ಬದಲಿಗೆ ಆಸ್ತಿಯನ್ನೆ ಪಡೆಯುವ ಪ್ರಕ್ರಿಯೆ ಇದಾಗಿದೆ. ಇದನ್ನು ಎಕ್ಸ್‌ಚೇಂಜ್ ಎಂದು ಕರೆಯುತ್ತೇವೆ. ಸೇಲ್ ಡೀಡ್‌ ಗೆ ಇರುವಷ್ಟೇ ಮೌಲ್ಯ ಎಕ್ಸ್‌ಚೇಂಜ್ ಗೆ ಇರುತ್ತದೆ.

ಗಿಫ್ಟ್‌ ಡೀಡ್ : ಒಂದು ಆಸ್ತಿಯನ್ನು ಅದರ ಮಾಲೀಕ ತನಗೆ ಇಷ್ಟ ಬಂದವರಿಗೆ ಉಡುಗೊರೆಯಾಗಿ ( ಉಚಿತವಾಗಿ ) ನೀಡಿ ನೋಂದಣಿ ಮಾಡಿಕೊಡುವ ಪ್ರಕ್ರಿಯೆಯನ್ನು ಗಿಫ್ಟ್‌ ಡೀಡ್ ಎಂದು ಕರೆಯುತ್ತೇವೆ. ಅಸ್ತಿ ವರ್ಗಾವಣೆ ಕಾಯಿದೆ 1882 ಸೆಕ್ಷನ್ 122 ಇದರ ಬಗ್ಗೆ ಹೆಳುತ್ತದೆ. ಅಸ್ತಿಯನ್ನು ಉಡುಗೊರೆ ಪಡೆಯುವರನ್ನು ಡೋನಿ ಎಂಥಲೂ ಕೊಡುವರನ್ನು ಡೋನರ್‌ ಎಂದು ಕರೆಯುತ್ತೇವೆ.

concept of exchange under TPA Act : ಸ್ವತ್ತುಗಳ ಅದಲಿ- ಬದಲಿ ವರ್ಗಾವಣೆಯನ್ನು ಪುರಾತನದಲ್ಲಿ ಕಾಲದಲ್ಲಿ ನೋಡುತ್ತಿದ್ದೆವು. ಹಿಂದಿನ ಕಾಲದಲ್ಲಿ ಒಂದು ವಸ್ತು ಕೊಟ್ಟು ಅದಕ್ಕೆ ಪ್ರತಿಯಾಗಿ ಹಣ ಬದಲಿಗೆ ಅಗತ್ಯ ಮತ್ತೊಂದು ವಸ್ತು ಪಡೆಯುತ್ತಿದ್ದರು. ಅಧುನಿಕ ಕಾಲದಲ್ಲಿ ಈ ಪದ್ಧತಿಯನ್ನು ಕಾನೂನು ಒಪ್ಪಿಕೊಂಡಿದೆ. ಭಾರತದಲ್ಲಿ ಆಸ್ತಿ ವರ್ಗಾವಣೆ ಕಾನೂನು ಸಹ ಇದಕ್ಕೆ ಅವಕಾಶ ನೀಡಿದೆ.

ಆಸ್ತಿ ಬದಲಿ ಪರಿಕಲ್ಪನೆ ಬಗ್ಗೆ TPA Act 1882 ನ ಸೆಕ್ಷನ್ 118 ನಿಂದ 121 ಹೇಳುತ್ತದೆ. ಇದು ತುಂಬಾ ಪುರಾತನ ಕಾಲದ ಪದ್ಧತಿಯಾಗಿದ್ದರೂ ಆಸ್ತಿಯ ಹಕ್ಕುಗಳನ್ನು ಈ ವಿಧಾನದ ಮೂಲಕವೂ ವರ್ಗಾವಣೆ ಮಾಡಬಹುದು. ಸೆಕ್ಷನ್ 118 ರ ಪ್ರಕಾರ ಒಬ್ಬರು ವ್ಯಕ್ತಿಗಳು ಪರಸ್ಪರ ಸಮ್ಮತಿ ಮೇರೆಗೆ ತಮ್ಮ ಅಸ್ತಿಗಳನ್ನು ಪರಸ್ಪರ ಕೊಟ್ಟು ಪಡೆದುಕೊಳ್ಳಬಹುದಾಗಿದೆ. ಆಸ್ತಿಯನ್ನಾದರೂ ನೀಡಬಹುದು, ಅಥವಾ ಇನ್ಯಾವುದೇ ವಸ್ತುವನ್ನು ಸಹ ನೀಡಬಹುದು. ಇದನ್ನು ಎಕ್ಸ್‌ಚೇಂಜ್ ಎಂದು ಕರೆಯುತ್ತೇವೆ.

ಉದಾಹರಣೆಗೆ ಒಬ್ಬ ವ್ಯಕ್ತಿ ಐಶರಾಮಿ ಕಾರನ್ನು ಎ ಎಂಬಾತನಿಗೆ ನೀಡಿ, ಕಾರಿಗೆ ಬದಲಾಗಿ ಮನೆಯನ್ನು ಪಡೆಯಬಹುದು. ಅದರೆ ಈ ವರ್ಗಾವಣೆಗೆ ಇಬ್ಬರು ವ್ಯಕ್ತಿಗಳ ಪರಸ್ಪರ ಸಮ್ಮತಿ ಅತಿಮುಖ್ಯವಾಗುತ್ತದೆ. ಅದೇ ರೀತಿ ಒಂದು ಸ್ಥಿರಾಸ್ತಿಯನ್ನು ಮತ್ತೊಂದು ಸ್ಥಿರಾಸ್ತಿಗೆ ಕೊಟ್ಟು ಪಡೆದುಕೊಳ್ಳುವುದನ್ನು ಕಾನೂನು ಪರಿ ಭಾಷೆಯಲ್ಲಿ “exchange” ಎಂದು ಕರೆಯುತ್ತೇವೆ.

ಸ್ಟಾಂಪ್ ಡ್ಯೂಟಿ: ಹೀಗೆ ಒಂದು ಸ್ಥಿರಾಸ್ತಿಗೆ ಮತ್ತೊಂದು ಸ್ಥಿರಾಸ್ತಿಯನ್ನು ನೀಡಿ ಮಾಡುವ ಸೇಲ್ ಪ್ರಕ್ರಿಯೆಗೆ ಕರ್ನಾಟಕ ನೋಂದಣಿ ಮತ್ತು ಮುದ್ರಾಂಕ ಕಾಯ್ದೆ ಪ್ರಕಾರ ಯಾವ ಆಸ್ತಿಯ ಸರ್ಕಾರದ ಮಾರ್ಗಸೂಚಿ ದರ ಹೆಚ್ಚು ಇರುತ್ತದೆ ಆ ಆಸ್ತಿಯನ್ನು ಪರಿಗಣಿಸಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ಎರಡು ಆಸ್ತಿಗಳ ಹಕ್ಕುಗಳು ವರ್ಗಾವಣೆಯಾದರೂ ಒಂದು ಆಸ್ತಿಗೆ ಮಾತ್ರ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಆರ್ಟಿಕಲ್ 26 ಹೇಳುತ್ತದೆ.

ಒಂದು ವೇಳೆ ಒಂದು ಆಸ್ತಿಯ ಮೌಲ್ಯ 5 ಲಕ್ಷ ರೂ. ಇದ್ದು, ಇನ್ನೊಂದು ಆಸ್ತಿಯ ಮೌಲ್ಯ 4 ಲಕ್ಷ ರೂ. ಇದ್ದು, ಎರಡೂ ಆಸ್ತಿಗಳನ್ನು ಅದಲಿ – ಬದಲಿ ( ಎಕ್ಸ್‌ಚೇಂಜ್ ) ಮಾಡಿಕೊಂಡಲ್ಲಿ, ಉಳಿದ ಒಂದು ಲಕ್ಷ ರೂ. ಹಣವನ್ನು ನಗದು ರೂಪದಲ್ಲಿ ನೀಡಬಹುದು. ಇದನ್ನು ಕೂಡ exchange ಅಂತಲೇ ಪರಿಗಣಿಸಬೇಕು.

ಆಸ್ತಿಯ ಬದಲಿ ವರ್ಗಾವಣೆ ಸೇಲ್ ಪ್ರಕ್ರಿಯೆ ಊರ್ಜಿತವಾಗಲು ಈ ಮೂರು ಅಂಶಗಳು ವ್ಯಹವಾರದಲ್ಲಿ ಅಡಗಿರಬೇಕು.

*ಪರಸ್ಪರ ಬದಲಾವಣೆ

*ಆಸ್ತಿ ಬದಲಾವಣೆ ಕಾನೂನು ಬದ್ಧವಾಗಿರಬೇಕು

*ಮೌಖಿಕ ವಿನಿಮಯದ ಸಮರ್ಥತೆ    ಈ ಮೂರು ಅಂಶಗಳು ಕಡ್ಡಾಯವಾಗಿ ಇರಬೇಕು.

ಬದಲಿ ಅಸ್ತಿ exchange ಡೀಡ್ : ಒಂದು ಆಸ್ತಿಯನ್ನು ಕೊಟ್ಟು ಮತ್ತೊಂದು ಆಸ್ತಿಯನ್ನು ಪಡೆಯುವ ಬದಲಿ ಡೀಡ್‌ ನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಆದರೆ ಸ್ಥಿರಾಸ್ತಿಯನ್ನು ಒಬ್ಬರ ಒಡೆತನದಲ್ಲಿರುವ ಆಸ್ತಿಯನ್ನು ಇನ್ನೊಬ್ಬರು ವಿನಿಯಮ ಮಾಡಲು ಸಾಧ್ಯವಿಲ್ಲ. ಆಸ್ತಿಯ ಮೇಲಿನ ಹಕ್ಕುಳ್ಳವರು ಮಾತ್ರ ವಿನಿಯಮ ಮಾಡಿಕೊಳ್ಳಲು ಅರ್ಹರು. ಪತ್ನಿಯ ನಿರ್ವಹಣೆಗಾಗಿ ಆಸ್ತಿಯನ್ನು ನೀಡಿದರೆ ಅದು ವಿನಿಯಮ ಆಗುವುದಿಲ್ಲ.

ಕಾನೂನು ಬದ್ಧ ವಿನಿಮಯ: ಒಂದು ಆಸ್ತಿಯನ್ನು ಮತ್ತೊಂದು ಆಸ್ತಿಗೆ ವಿನಿಯಮ ಮಾಡಿಕೊಳ್ಳುವುದು ಕಾನೂನು ಬದ್ಧವಾಗಿರಬೇಕು. ಈ ಕುರಿತ ಕರಾರಿನಲ್ಲಿನ ಷರತ್ತುಗಳನ್ನು ಇಬ್ಬರೂ ಪರಸ್ಪರ ಒಪ್ಪಿ ಪಾಲಿಸಿರಬೇಕು. ಕಾನೂನು ವಿರೋಧಿ, ನಿಯಮ ಬಾಹಿರ ವಿನಿಯಮಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಅಂತಹ ವಿನಿಯಮಗಳು ಆದರೂ ಸಹ ಕಾನೂನು ದೃಷ್ಠಿಯಲ್ಲಿ ಅವು ಕಾರ್ಯಗತಕ್ಕೆ ಬರುವುದಿಲ್ಲ. ಕಾನೂನು ಬಾಹಿರ ವಿನಿಯಮಗಳು ಆದರೂ ಸಹ ಅವುಗಳಿಗೆ ಮಾನ್ಯತೆ ಇರುವುದಿಲ್ಲ ಎಂದು ಜೀನಾ ಕೇತ್ರಾಮೋಹನ್ ಜೀನಾ ಪ್ರಕರಣದಲ್ಲಿ ತೀರ್ಪು ನೀಡಿದ್ದು, ಕಾನೂನು ಬಾಹಿರ ವಿನಿಯಮ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ದಾವೆ ಹೂಡಬಹುದಾಗಿದೆ.

ಕಡ್ಡಾಯ ನೋಂದಣಿ: ನೊಂದಣಿ ಕಾಯಿದೆ ತಿದ್ದುಪಡಿ ನಿಯಮ 49 ಪ್ರಕಾರ, ಕಡ್ಡಾಯವಾಗಿ ಎಕ್ಸ್‌ಚೇಂಜ್ ಡೀಡ್‌ ನ್ನು ನೋಂದಣಿ ಮಾಡಬೇಕು. ನೋಂದಣಿಯಾಗದ ಆಸ್ತಿ ವಿನಿಯಮ ಅಗ್ರಿಮೆಂಟ್‌ ನ್ನು ನ್ಯಾಯಾಲಯದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸುವುದಿಲ್ಲ. ಕರಾರು ನೋಂದಣಿಯಾಗದ ಹೊರತು ಮಾನ್ಯತೆ ಇಲ್ಲ. ಚರಾಸ್ತಿಗಳ ವಿನಿಮಯ ಆಗಿದ್ದಲ್ಲಿ ಅವುಗಳ ಮೊತ್ತ ನೂರು ರೂಪಾಯಿಗೂ ಹೆಚ್ಚಾಗಿದ್ದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು.

ಆಸ್ತಿ ವಿನಿಯಮ ಡೀಡ್‌ ನಲ್ಲಿ ಪಕ್ಷಗಾರರ ಹಕ್ಕುಗಳು: ಒಂದು ಆಸ್ತಿಯನ್ನು ಕೊಟ್ಟು ಬದಲಿಯಾಗಿ ಆಸ್ತಿಯನ್ನೇ ಪಡೆಯುವ ಪ್ರಕ್ರಿಯೆಯಲ್ಲಿ ಪಕ್ಷಗಾರರ ಹಕ್ಕು ಮತ್ತು ಜವಬ್ದಾರಿಗಳ ಬಗ್ಗೆ ಸೆಕ್ಷನ್ 119 ಮತ್ತು 120 ಹೇಳುತ್ತದೆ. ಅಲ್ಲದೇ ಇಲ್ಲಿ ಪಕ್ಷಗಾರರ ಹಿತ ಕಾಯುವ ಬಗ್ಗೆ ಹೇಳುತ್ತದೆ.

ಆಸ್ತಿ ವಿನಿಮಯ ಪ್ರಕ್ರಿಯೆಯಲ್ಲಿ ಒಬ್ಬ ಪಕ್ಷಗಾರನಿಂದ ಇನ್ನೊಬ್ಬ ಪಕ್ಷಗಾರನಿಗೆ ನಷ್ಟವಾದಲ್ಲಿ ನಷ್ಟಹೊಂದಿದಾತ ನಷ್ಟವನ್ನು ಎದುರು ಪಕ್ಷಗಾರನಿಂದ ವಸೂಲಿ ಮಾಡಬಹುದು. ಯಾರದ್ದೋ ಆಸ್ತಿಯನ್ನು ಒಬ್ಬ ವ್ಯಕ್ತಿ ವಿನಿಯಮ ಮಾಡಿ ಲಾಭ ಮಾಡಿಕೊಂಡು ಅಕ್ರಮ ಎಸಗಿದರೆ ಅಂತಹ ಸಂದರ್ಭದಲ್ಲಿ ನಷ್ಟ ಉಂಟು ಮಾಡಿದ ವ್ಯಕ್ತಿಯಿಂದ ನಷ್ಟ ರೀಕರವರಿ ಮಾಡಲು ದಾವೆ ಸಲ್ಲಿಸಬಹುದು. ನಷ್ಟ ಪರಿಹಾರ ದಾವೆಯನ್ನು ನ್ಯಾಯಾಲಯದಲ್ಲಿ ಸಲ್ಲಿಸಬಹುದಾಗಿದೆ. ಅಲ್ಲದೇ ಆಸ್ತಿ ವಿನಿಯಮ ಕರಾರನ್ನು ರದ್ದುಗೊಳಿಸಬಹುದು. ಅಥವಾ ವಿನಿಯಮಕ್ಕೆ ಒಳಗಾದ ಅಸ್ತಿಯ ಹಕ್ಕುಗಳು ಇನ್ನೊಬ್ಬ ವ್ಯಕ್ತಿಯಲ್ಲಿ ಸೇರಿದ್ದರೆ ಅಂತಹ ವಿನಿಯಮ ಪ್ರಕ್ರಿಯೆಯನ್ನು ರದ್ದು ಮಾಡಬಹುದು.

ಉಪ ಸಂಹಾರ: ಸಮಾಜದಲ್ಲಿ ಆಸ್ತಿಯ ಬದಲಿ ವರ್ಗಾವಣೆ ಸಾಮಾನ್ಯ. ಸ್ಥಿರ ಅಥವಾ ಚರಾಸ್ತಿಗಳನ್ನು ವ್ಯಕ್ತಿಗಳು ಪರಸ್ಪರ ಒಪ್ಪಿ ವಿನಿಯಮ ಮಾಡಿಕೊಳ್ಳಬಹುದು. ಹಲವು ಕಾರಣಗಳಿಂದ, ಕೆಲ ಷರತ್ತು ವಿಧಿಸಿ ಅದಕ್ಕೆ ಅನುಗುಣವಾಗಿ ಆಸ್ತಿಯನ್ನು ಅಸ್ತಿ ವಿನಿಯಮ ಮೂಲಕ ವರ್ಗಾವಣೆ ಪಡೆಯಬಹುದಾಗಿದೆ. ಆಸ್ತಿ ವರ್ಗಾವಣೆ ಕಾಯಿದೆಯಲ್ಲಿ ಸಹ ಇದಕ್ಕೆ ಮಾನ್ಯತೆ ನೀಡಲಾಗಿದೆ.

Exit mobile version