Revenue Facts

ಪರಿಸರ ಸೂಕ್ಷ್ಮ ವಲಯ: ಚಂಡೀಗಢದ ಹೌಸಿಂಗ್‌ ಯೋಜನೆ ಸ್ಥಗಿತ

ಪರಿಸರ ಸೂಕ್ಷ್ಮ ವಲಯ: ಚಂಡೀಗಢದ ಹೌಸಿಂಗ್‌ ಯೋಜನೆ ಸ್ಥಗಿತ

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವು ಚಂಡೀಗಢದ ಹೌಸಿಂಗ್‌ ಬೋರ್ಡ್‌ನ ಬಹುನಿರೀಕ್ಷಿತ ಐಟಿ ಪಾರ್ಕ್‌ ಒಳಗೊಂಡಂತೆ ನಿರ್ಮಿಸಲು ಉದ್ದೇಶಿಸಿದ್ದ ವಸತಿ ಯೋಜನೆಯನ್ನು ಸ್ಥಗಿತಗೊಳಿಸಿದೆ. ಈ ಯೋಜನೆಯ ಪ್ರದೇಶವು ಸುಖ್ನ ವನ್ಯಜೀವಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ಗಡಿಯೊಳಗೆ ಬರುವುದರಿಂದ ಸ್ಥಗಿತಗೊಳಿಸಿದೆ ಎನ್ನಲಾಗಿದೆ.

2017ರಲ್ಲಿ ಚಂಡೀಗಢವು ಸುಖ್ನ ವನ್ಯ ಜೀವಿ ಅಭಯಾರಣ್ಯದ ಸುತ್ತ 2ರಿಂದ 2.75 ಕಿ.ಮೀ ತನಕದ ಬೌಂಡರಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಿತ್ತು. ಅದೇ ವರ್ಷ ಪರಿಸರ ಸಚಿವಾಲಯವೂ ಇದನ್ನು ಸೂಚಿಸಿತ್ತು.

ಕಳೆದ ತಿಂಗಳು ಚಂಡೀಗಢ ಹೌಸಿಂಗ್‌ ಬೋರ್ಡ್‌ನ ಯುಟಿ ಅಡ್ಮಿನಿಸ್ಟ್ರೇಟರ್‌ ಬನ್ವರಿಲಾಲ್‌ ಪುರೋಹಿತ್‌ ಅವರು ಯೋಜನೆಯ ವೈಲ್ಡ್‌ಲೈಫ್‌ ಕ್ಲಿಯರೆನ್ಸ್‌ ನೀಡಿದ್ದರು. ಅಂತಿಮ ಅನುಮೋದನೆಗಾಗಿ ಈ ಕಡತವನ್ನು ಪರಿಸರ ಸಚಿವಾಲಯಕ್ಕೆ ಕಳುಹಿಸಿದ್ದರು. ಎನ್ವಿರಾನ್‌ಮೆಂಟ್‌ ಕ್ಲಿಯರೆನ್ಸ್‌ ಅಕ್ಟೋಬರ್‌ ತಿಂಗಳಲ್ಲಿ ಲಭ್ಯವಾಗಬಹುದೆಂಬ ನಿರೀಕ್ಷೆ ಮಾಡಲಾಗಿತ್ತು.

ಆದರೆ, ಈಚೆಗೆ ನಡೆದ ನ್ಯಾಷನಲ್‌ ಬೋರ್ಡ್‌ ಫಾರ್‌ ವೈಲ್ಡ್‌ಲೈಫ್‌ ಸಭೆಯಲ್ಲಿ ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ನಡೆಯುವಂತಿಲ್ಲ. ಇದು ಸುಖ್ನ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವೆಂದು ಘೋಷಿಸಿದೆ.

‘ನಾವು ಸಚಿವಾಲಯ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಪಡೆದಿಲ್ಲ. ವೈಲ್ಡ್‌ಲೈಫ್‌ ಬೋರ್ಡ್‌ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂಬುದು ಗೊತ್ತಾಗಿದೆ. ಉದ್ದೇಶಿತ ಯೋಜನೆ ಸ್ಥಳವು ಅಭಯಾರಣ್ಯದ ಪರಿಸರ ಸೂಕ್ಷ್ಮ ಪ್ರದೇಶದಿಂದ 1.5 ಕಿ.ಮೀ ದೂರದಲ್ಲಿದೆ. ನಾವು ಮತ್ತೊಂದು ಬಾರಿ ಈ ವಿಚಾರವನ್ನು ಸಚಿವಾಲಯದ ಗಮನಕ್ಕೆ ತರುತ್ತೇವೆ‘ ಎಂದು ಚಂಡೀಗಢ ಹೌಸಿಂಗ್‌ ಬೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶ್‌ಪಾಲ್‌ ಗರ್ಗ್‌ ತಿಳಿಸಿದ್ದಾರೆ.

ಸಾಮಾನ್ಯವಾಗಿ ಪರಿಸರ ಸೂಕ್ಷ್ಮ ವಲಯದದಲ್ಲಿ ಪಾಲಿಸಬೇಕಾದ ನಿಯಮಗಳು
• ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಯಾವ ಉದ್ದೇಶವೇ ಆಗಿದ್ದರೂ, ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣ ಮಾಡುವಂತಿಲ್ಲ
• ಈ ಪ್ರದೇಶದ ಹೊರಗೆ 0.5 ತ್ರಿಜ್ಯ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಿರ್ಮಾಣವನ್ನು ಅನುಮತಿಸುವುದಿಲ್ಲ
• 0.5 ಕಿ.ಮೀ.ನಿಂದ 1.25 ಕಿ.ಮೀ.ವರೆಗೆ 15 ಅಡಿವರೆಗೆ ಕಡಿಮೆ ಸಾಂದ್ರತೆ ಮತ್ತು ತಗ್ಗು ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವಿದ್ದರೆ, 1.25 ಕಿ.ಮೀ.ಗಿಂತ ನಂತರ ಮನೆ ಸೇರಿದಂತೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚಂಡೀಗಢ ಹೌಸಿಂಗ್‌ ಬೋರ್ಡ್‌ ಯೋಜನೆ:
ಈ ಯೋಜನೆಯು ಮೂರು ಹಂತಗಳಲ್ಲಿ 728 ಪ್ಲಾಟ್‌ಗಳ ನಿರ್ಮಾಣ ಉದ್ದೇಶ ಹೊಂದಿದೆ. ಇದಕ್ಕೆ ಚಂಡೀಗಢ ಹೌಸಿಂಗ್‌ ಬೋರ್ಡ್‌ನ ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ 2020 ಡಿಸೆಂಬರ್‌ನಲ್ಲಿ ಒಪ್ಪಿಗೆ ನೀಡಿದ್ದರು.

ಇದು ನಾಲ್ಕು ಬೆಡ್‌ರೂಮ್‌ಗಳ 28 ಮನೆಗಳು, 448 ಮೂರು ಬೆಡ್‌ ರೂಮ್‌ಗಳ ಮನೆ, ಎರಡು ಬೆಡ್‌ರೂಮ್‌ ಹೊಂದಿರುವ 252 ಮನೆಗಳನ್ನು ಹೊಂದಿರುವ ಏಳು ಅಂತಸ್ತಿನ ಕಟ್ಟಡದ ಯೋಜನೆ. ಸುಮಾರು 10.51 ಹಾಗೂ 6.43 ಎಕರೆ ಪ್ರದೇಶಗಳಲ್ಲಿ ಇದು ನಿರ್ಮಾಣವಾಗಲಿದ್ದು, ಎರಡು ಐಟಿ ಪಾರ್ಕ್‌ಗಳು ಇರಲಿವೆ. ಹಾಗೆಯೇ ಎರಡು ನೆಲಮಾಳಿಗೆಗಳಲ್ಲಿ ಪ್ರತಿ ಪ್ಲಾಟ್‌ಗೆ ಎರಡು ಕಾರುಗಳ ಪಾರ್ಕಿಂಗ್‌ ಸೌಕರ್ಯ ನೀಡಲಾಗುತ್ತದೆ.

Exit mobile version