Revenue Facts

ಮನೆಯ ಬಾಲ್ಕನಿಯ ಅಂದ ಹೆಚ್ಚಿಸಲು ಸರಳ ಸೂತ್ರಗಳು..

ಬೆಂಗಳೂರು, ಜು. 25: ನಿಮ್ಮ ಬಾಲ್ಕನಿಯನ್ನು ಮನೆಯ ನಿಮ್ಮ ನೆಚ್ಚಿನ ಭಾಗವನ್ನಾಗಿ ಮಾಡಿಕೊಳ್ಳಿ. ಅಲ್ಲಿ ನೀವು ತಾಜಾ ಗಾಳಿಯನ್ನು ಪಡೆಯುತ್ತಾ ವಿಶ್ರಾಂತಿಯನ್ನು ಪಡೆಯಬಹುದು. ಬಾಲ್ಕನಿಯೇ ನಿಮ್ಮ ಮನಕ್ಕೆ ಅಭಯಾರಣ್ಯದಂತೆ ಕಾಣುವಂತೆ ಮಾಡಿರಿ. ಮನಸ್ಸಿಗೆ ಶಾಂತಿ ಬೇಕು ಎಂದೆನಿಸಿದಾಗ ನಿಮ್ಮ ಮನೆಯ ಬಾಲ್ಕನಿ ನಿಮ್ಮ ಸ್ನೇಹ, ಪ್ರೀತಿ ತುಂಬಿದ ಸ್ಥಳವಾಗಿರುತ್ತದೆ. ಅಂತಹ ಬಾಲ್ಕನಿಯ ವಿನ್ಯಾಸಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ.

ಕೆಲ ಪಾಟ್‌ ಗಳನ್ನು ತಂದು ಗಿಡಗಳನ್ನು ನೆಡಿ. ವಿವಿಧ ಆಕಾರಗಳು ಮತ್ತು ಬಣ್ಣಗಳಲ್ಲಿ ಲಭ್ಯವಿರುವ ವಿವಿಧ ಸಸ್ಯಗಳನ್ನು ಆರಿಸಿಕೊಳ್ಳಿ. ಬಾಲ್ಕನಿಯ ರೇಲಿಂಗ್‌ಗಳ ಮೇಲೆ ಕೆಲ ಗಿಡಗಳನ್ನು ಸಾಲಾಗಿ ಇಡಿ. ನಿಮಗೆ ಮಣ್ಣಿನ, ಸೆರಾಮಿಕ್‌, ಸಿಮೆಂಟ್‌ ಹಾಗೂ ಪ್ಲಾಸ್ಟಿಕ್ ಪಾಟ್‌ ಗಳು ಸಿಗುತ್ತವೆ. ನಿಮ್ಮಷ್ಟದ ಪಾಟ್‌ ಅನ್ನು ತಂದು ಗಿಡಗಳನ್ನು ನೆಡಿ. ಹೂವು ಬಿಡುವಂತಹ ಗಿಡಗಳಿದ್ದರೆ, ನೋಡಲು ಬಣ್ಣ ಬಣ್ಣದಿಂದ ಕೂಡಿರುತ್ತದೆ. ನಿಮಗೆ ಇಷ್ಟವಾಗುವಂತಹ ಗಿಡಗಳನ್ನು ನೆಡುವುದು ಸೂಕ್ತ. ಗಿಡಗಳನ್ನು ಇಡಲು ಪಾಟ್‌ ಅಷ್ಟೇ ಅಲ್ಲದೇ, ರೈಲಿಂಗ್ಸ್‌ ಗಳನ್ನು ಬಳಸಿ. ನಿಮ್ಮ ಆಯ್ಕೆಯ ಹೂವಿನ ಸಸ್ಯಗಳು, ಗಿಡಮೂಲಿಕೆಗಳು ಅಥವಾ ಬಳ್ಳಿಗಳೊಂದಿಗೆ ಈ ಪ್ಲಾಂಟರ್‌ಗಳನ್ನು ತುಂಬಿಸಿ.

ಪಕ್ಷಿಗಳ ಚಿಲಿಪಿಲಿ ಶಬ್ದಗಳು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ನಿಮ್ಮ ಸ್ನೇಹಶೀಲ ಬಾಲ್ಕನಿಯಲ್ಲಿ ವಿಶ್ರಾಂತಿ ಪಡೆಯಲು ಬಯಸುವವರು. ಪಕ್ಷಿಗಳು ಕೂಡ ಅಲ್ಲಿಗೆ ಬರುವಂತೆ ಮಾಡಿ. ಹಸಿರು ಇದ್ದ ಕಡೆಗಳಲ್ಲಿ ಪಕ್ಷಿಗಳು ಬರುವುದು ಸಹಜ. ಪಕ್ಷಿಗಳಿಗೆಂದು ಆಹಾರವನ್ನು ಇಟ್ಟರೆ, ಅವು ಪದೇ ಪದೇ ಬರುತ್ತವೆ. ಪಕ್ಷಿಗಳ ಊಟ ಇಡುವ ಪೆಟ್ಟಿಗೆ ಗಳು ಅಂಗಡಿಯಲ್ಲಿ ಸಿಗುತ್ತವೆ. ಅವನ್ನು ತಂದು, ಅದರಲ್ಲಿ ಕಾಳುಗಳನ್ನು ಹಾಕಿ ಇಡಿ.

ನಿಮ್ಮ ಮನೆಯ ಬಾಲ್ಕನಿಯಲ್ಲಿ ಸ್ಥಳಾವಕಾಶವಿದ್ದರೆ, ಪೀಠೋಪಕರಣಗಳನ್ನು ಜೋಡಿಸಿ. ಮರದ ಅಥವಾ ಲೋಹದ ಪಿಠೋಪಕರಣಗಳು ವಿವಿಧ ಬಗೆಯಲ್ಲಿ ಸಿಗುತ್ತವೆ. ಖುರ್ಚಿ, ಟೇಬಲ್‌ ಇದ್ದರೆ ನೀವು ಸ್ವಲ್ಪ ಸಮಯ ಅಲ್ಲಿ ಕುಳಿತು ಸಮಯ ಕಳೆಯಲು ಚೆನ್ನಾಗಿರುತ್ತದೆ. ಬೆಳಗಿನ ಜಾವ ಪೇಪರ್‌ ಓದುವವರು ಪೇಪರ್‌ ಅನ್ನು ಬಾಲ್ಕನಿಯಲ್ಲೇ ಕುಳಿತು ಓದಬಹುದು. ಮನೆಗೆ ಸ್ನೇಹಿತರು, ಸಂಬಂಧಿಕರು ಬಂದಾಗ ಕಾಫಿ ಕುಡಿಯಲು ಈ ಜಾಗವನ್ನು ಬಳಸಬಹುದು.

ನಿಮ್ಮ ಬಾಲ್ಕನಿಯಲ್ಲಿ ಗಿಡಮೂಲಿಕೆಗಳು ಇರಲಿ. ಪುದಿನ, ತುಳಸಿ, ಅಮೃತಬಳ್ಳಿ, ದೊಡ್ಡಪತ್ರೆ ಸೇರಿದಂತೆ ಹಲವು ರೀತಿಯ ಔಷಧಿ ಗುಣಗಳಿರುವ ಗಿಡಮೂಲಿಕೆಗಳನ್ನು ನಿಮ್ಮ ಬಾಲ್ಕನಿಯ ಮೂಲೆಯಲ್ಲಿ ಇಡಿ. ಇದರಿಂದ ಹೊರ ಬರುವ ಸುವಾಸನೆಯೂ ಮನಕೆ ಮುದ ಕೊಡುತ್ತದೆ. ಅವಶ್ಯಕತೆ ಬಿದ್ದರೆ, ಅಡುಗೆಯಲ್ಲಿ ಬಳಸಲು ಸಹಾಯವಾಗುತ್ತದೆ.

ನಿಮ್ಮ ಬಾಲ್ಕನಿಯಲ್ಲಿ ಬಳ್ಳಿಯಂತಹ ಗಿಡಗಳನ್ನು ಕೂಡ ಬೆಳೆಸುವುದು ಸೂಕ್ತ. ಗೋಡೆಗಳಿಗೆ ಅಂಟಿಕೊಳ್ಳುವಂತೆ ಈಗ ಸಾಕಷ್ಟು ರೀತಿಯ ಬಳ್ಳಿಗಳು ನರ್ಸರಿಗಳಲ್ಲಿ ಲಭ್ಯವಿದೆ. ನಿಮಗೆ ಸೂಕ್ತ ಎನಿಸುವ ಬಳ್ಳಿಗಳನ್ನು ತಂದು ನಿಮ್ಮ ಬಾಲ್ಕನಿಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಬಾಲ್ಕನಿಯಲ್ಲಿ ಈ ಬಳ್ಳಿಗಳು ಗೋಡೆಯ ಮೇಲೆ ಹಬ್ಬಿದರೆ ನಿಮ್ಮ ಮನೆಯು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ.

Exit mobile version