Revenue Facts

ಆಸ್ತಿಗಾಗಿ ನಕಲಿ ದಾಖಲೆ ಸೃಷ್ಟಿಸಿದರೆ ಉತ್ತರ ಪ್ರದೇಶದಲ್ಲಿ ಏನು ಶಿಕ್ಷೆ ಗೊತ್ತಾ?

ಉತ್ತರ ಪ್ರದೇಶದ ಗೋರಕ್‌ಪುರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನರ್ಸಿಂಗ್ ಕಾಲೇಜು ನಡೆಸುತ್ತಿದ್ದ ಆರೋಪಿಗಳನ್ನು ಆಗಸ್ಟ್ 15ರಂದು ದೆಹಲಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಈ ಪ್ರಕರಣದ ಮುಂದುವರಿದ ಭಾಗವಾಗಿ ಅಲ್ಲಿನ ಜಿಲ್ಲಾಡಳಿತವು ಕಠಿಣ ಕ್ರಮ ಕೈಗೊಂಡಿದ್ದು, ರಾಜ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನ ನಿರ್ದೇಶಕ ಮತ್ತು ಮಾಲೀಕರಿಗೆ ಸಂಬಂಧಿಸಿದ ಅಂದಾಜು ಒಂದುನೂರು ಕೋಟಿ ರೂಪಾಯಿ ಮೌಲ್ಯದ ಒಂಬತ್ತು ಸ್ವತ್ತುಗಳನ್ನು ಕಳೆದ ವಾರವಷ್ಟೇ ಗ್ಯಾಂಗ್‌ಸ್ಟರ್ ಕಾಯ್ದೆ ಅನ್ವಯ ಮುಟ್ಟುಗೋಲು ಹಾಕಿಕೊಂಡಿದೆ.

ಮಾಲೀಕರ ಫ್ಲ್ಯಾಟ್ ಮತ್ತು ನರ್ಸಿಂಗ್ ಕಾಲೇಜು ಕಟ್ಟಡ ಮಾತ್ರವಲ್ಲದೇ ಒಂಬತ್ತು ದ್ವಿಚಕ್ರ ವಾಹನಗಳು ಮತ್ತು 30 ಬ್ಯಾಂಕ್ ಖಾತೆಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಆರೋಪಿಗಳು ಮತ್ತು ಮಾಲೀಕರು ನಕಲಿ ದಾಖಲೆಗಳ ಮೂಲಕ ಕಾಲೇಜು ನಡೆಸುತ್ತಿದ್ದು, ಮಂಜೂರಾದ ಪ್ರವೇಶ ಸಾಮರ್ಥ್ಯವನ್ನು ಮೀರಿ ಹೆಚ್ಚುವರಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದ್ದಾರೆ ಎಂದು ಅವರು ಹೇಳಿದರು.

ಅಕ್ರಮ ಚಟುವಟಿಕೆಗಳ ಮೂಲಕ ಸಂಪಾದಿಸಿದ ಆಸ್ತಿ ಮಟ್ಟುಗೋಲು ಹಾಕಿಕೊಂಡಿರುವ ಜಿಲ್ಲಾಡಳಿತದ ಕ್ರಮವು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಆರೋಪಿಗಳು ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಪಿಪ್ರೈಚ್ ಪೊಲೀಸ್ ಠಾಣೆ ವ್ಯಾಪ್ತಿಯ ತುರ್ರಾ ಬಜಾರ್ ಪ್ರದೇಶದಲ್ಲಿ 2015ರಿಂದ ನರ್ಸಿಂಗ್ ಕಾಲೇಜು ನಡೆಸುತ್ತಿದ್ದರು. ಕಾಲೇಜಿನ ಮಾನ್ಯತೆ 2017ರಲ್ಲಿಯೇ ಮುಕ್ತಾಯಗೊಂಡಿತ್ತು. ಆದರೆ ಕಾಲೇಜು ನಿರ್ದೇಶಕರು ನಕಲಿ ದಾಖಲೆಗಳ ಮೂಲಕ ಹೊಸ ವಿದ್ಯಾರ್ಥಿಗಳ ಪ್ರವೇಶಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದ್ದರು.

ಕಳೆದ ಆಗಸ್ಟ್‌ನಲ್ಲಿ ಜಿಲ್ಲಾಡಳಿತವು ದಾಖಲೆಗಳ ಪರಿಶೀಲನೆ ನಡೆಸಿದಾಗ ಅಕ್ರಮವು ಬೆಳಕಿಗೆ ಬಂದಿದೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಗ್ ಅವರು ಕಾಲೇಜಿನ ವಿರುದ್ಧ ವರದಿ ಸಲ್ಲಿಸಿದ್ದರು. ನಂತರ, ಆಗಸ್ಟ್ 15ರಂದು ಗ್ಯಾಂಗ್ಸ್ಟರ್ ಕಾಯ್ದೆ ಅಡಿ ಆರೋಪಿಗಳನ್ನು ಬಂಧಿಸಲಾಯಿತು.

ಅಂದಿನಿಂದ ಮಾಲೀಕ ಡಾ. ಅಭಿಷೇಕ್ ಯಾದವ್, ಅವರ ಪತ್ನಿ ಡಾ. ಮನಿಷಾ ಯಾದವ್, ಅಭಿಷೇಕ್ ಅವರ ಸಹೋದರಿ ಡಾ. ಪೂನಮ್ ಯಾದವ್ ಮತ್ತು ಅಳಿಯ ಡಾ. ಸಿ. ಪ್ರಸಾದ್ ಅಲಿಯಾಸ್ ಚೌತಿ ಮತ್ತು ಇತರ ಇಬ್ಬರು ಜೈಲಿನಲ್ಲಿದ್ದಾರೆ.

ಜಿಲ್ಲಾಧಿಕಾರಿ ಕೃಷ್ಣ ಕರುಣೇಶ್ ಅವರು ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿದ ಎರಡು ದಿನಗಳಲ್ಲಿ ಪೊಲೀಸ್ ಅಧಿಕಾರಿಗಳು ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಏನಿದು ಗ್ಯಾಂಗ್‌ಸ್ಟರ್ ಕಾಯ್ದೆ:
ಗ್ಯಾಂಗ್‌ಸ್ಟರ್ ಕಾಯ್ದೆಯ ಸೆಕ್ಷನ್ 2 (ಬಿ) ರಲ್ಲಿ ಉಲ್ಲೇಖಿಸಿದಂತೆ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಉದ್ದೇಶದಿಂದ ವ್ಯಕ್ತಿಗಳ ಗುಂಪು ಸಾಮೂಹಿಕವಾಗಿ ಅಥವಾ ಗುಂಪಿನ ಸದಸ್ಯರಲ್ಲಿ ಯಾರಾದರೂ ಒಬ್ಬ ವ್ಯಕ್ತಿಯು ಸಾಮಾಜಿಕ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿ ದರೋಡೆಕೋರರಂತೆ ವರ್ತಿಸುವುದನ್ನು ಗ್ಯಾಂಗ್‌ಸ್ಟರ್ (ದರೋಡೆಕೋರ) ಎಂದು ಪರಿಗಣಿಸಲಾಗಿದೆ.ಅಂತಹ ವರ್ತನೆ ತೋರುವ ಆರೋಪಿಗಳ ವಿರುದ್ಧ ಈ ಕಾಯ್ದೆಯನ್ನು ಪರಿಗಣಿಸಲಾಗುತ್ತದೆ.

Exit mobile version