Revenue Facts

ಬಾಡಿಗೆ ಮನೆಯ ಅಗ್ರಿಮೆಂಟ್ ನೋಂದಣಿ ಮಾಡಿಸುವ ಬಗ್ಗೆ ನಿಮಗೆ ತಿಳಿದಿದೆಯೇ..?

ಬಾಡಿಗೆ ಮನೆಯ ಅಗ್ರಿಮೆಂಟ್ ನೋಂದಣಿ ಮಾಡಿಸುವ ಬಗ್ಗೆ ನಿಮಗೆ ತಿಳಿದಿದೆಯೇ..?

ಬೆಂಗಳೂರು, ಜೂ. 30 : ದೇಶದಲ್ಲಿ ಶೇ. 95ರಷ್ಟು ವಸತಿ, ವಾಣಿಜ್ಯ ಕಟ್ಟಡಗಳನ್ನು ಬಾಡಿಗೆ ನೀಡಲಾಗುತ್ತದೆ. ಮನೆ, ಮಳಿಗೆಗಳನ್ನು ಬಾಡಿಗೆಗೆ ನೀಡುವಾಗ ಮಾಲೀಕರು 20 ರೂ.ನಿಂದ 200 ರೂ.ವರೆಗಿನ ಸ್ಟಾಂಪ್ ಪೇಪರ್ನಲ್ಲಿ ಒಪ್ಪಂದವನ್ನು ಪ್ರಿಂಟ್ ಹಾಕಿಸಿ ಸಹಿ ಮಾಡಬೇಕು. ನಂತರ ಇದನ್ನು ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ರಿಜಿಸ್ಟರ್ ಮಾಡಿಸಬೇಕು. ಆದರೆ, ಹೆಚ್ಚು ಮಂದಿ ಈ ಕೆಲಸವನ್ನು ಮಾಡುವುದಕ್ಕೆ ಹೋಗುವುದಿಲ್ಲ. ಸಮಯ ಹಣ ವ್ಯರ್ಥ ಮಾಡಿಕೊಳ್ಳುವುದು ಬೇಡ ಎಂದು ಸುಮ್ಮನಾಗುತ್ತಾರೆ. ಅಗ್ರಿಮೆಂಟ್ ಅನ್ನು ನೋಂದಣಿ ಮಾಡಿಸದೇ ಹೋದಲ್ಲಿ ಪ್ರತಿ ವರ್ಷ ಬಾಡಿಗೆಯನ್ನು ಹೆಚ್ಚಿಸುವಂತಿಲ್ಲ.

ಕರ್ನಾಟಕ ರೆಂಟ್ ಆ್ಯಕ್ಟ್ 1999ರ ಪ್ರಕಾರ, ಬಾಡಿಗೆಯ ಕರಾರನ್ನು ನೋಂದಾಣಾಧಿಕಾರಿ ಕಚೇರಿಯಲ್ಲಿ ಮುದ್ರಾಂಕ ಶುಲ್ಕ ಪಾವತಿಸಿ ರಿಜಿಸ್ಟರ್ ಮಾಡಿಸಬೇಕು. ಅಗ್ರಿಮೆಂಟ್ ಮಾಡಿಸದೇ ಹೋದರೆ, ಪ್ರತೀ ವರ್ಷ ಶೇ.5 ರಷ್ಟು ಬಾಡಿಗೆಯ ಮೊತ್ತವನ್ನು ಹೆಚ್ಚಿಸುವಂತಿಲ್ಲ. ಕರಾರು ಒಪ್ಪಂದದ ಅವಧಿ 11 ತಿಂಗಳಿಗಿಂತ ಜಾಸ್ತಿ ಇದ್ದಾಗ, ಮೊದಲಿಗೆ ರಿಜಿಸ್ಪ್ರೇಷನ್ ಕಾಯಿದೆ ಸೆಕ್ಷನ್ 17(1)ರಡಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಈ ರಿಜಿಸ್ಟ್ರೇಷನ್ ಅನ್ನು ಮಾಡಿಸಲೇಬೇಕು.

ಸೆಕ್ಷನ್ 49ರ ಪ್ರಕಾರ ಯಾವ ದಾಖಲೆಗಳು ರಿಜಿಸ್ಟರ್ ಆಗಿರುವುದಿಲ್ಲವೋ ಅವುಗಳನ್ನು ಮೇಲಾಧಾರವಾಗಿ ಬಳಸಬಹುದೇ ಹೊರತು, ಅದನ್ನು ಬಾಡಿಗೆ ದರ ಹೆಚ್ಚಳ ಉದ್ದೇಶಕ್ಕೆ ಬಳಸಲಾಗದು. ಈಗಂತೂ ಬಹುತೇಕ ಜನರು ಬಾಡಿಗೆ ಮನೆಗಳಲ್ಲಿ ಇರುತ್ತಾರೆ. ಕೆಲವರು ಕಾನೂನಿನ ಬಗ್ಗೆ ಅರಿವಿರುವ ಕಾರಣ ಅಗ್ರಿಮೆಂಟ್ ಸೇರಿದಂತೆ ಕಾನೂನು ಪ್ರಕಾರವೇ ಮಾಲೀಕರು ಹಾಗೂ ಬಾಡಿಗೆದಾರರು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಆದರೆ, ಕೆಲವರು ನಂಬಿಕೆಯ ಮೇಲೆ ಒಪ್ಪಂದದ ಪತ್ರಗಳನ್ನು ನೋಂದಣಿ ಮಾಡಿಸುವುದೇ ಇಲ್ಲ. ಇನ್ನೂ ಕೆಲವರು ಸೋಮಾರಿತನ ಮಾಡಿಕೊಂಡು ನಿರ್ಲಕ್ಷ್ಯ ಮಾಡಿರುತ್ತಾರೆ. ಆದರೆ ಇದರಿಂದ ಸಮಸ್ಯೆಗಳು ಆಗುತ್ತವೆ.

Exit mobile version