ಡಿ ನೋಟಿಫಿಕೇಷನ್ ಎಂದರೆ ನೆನಪಾಗುವುದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಜೈಲು ದಿನಗಳು. ಡಿ ನೋಟಿಫಿಕೇಷನ್ ಅಕ್ರಮಗಳ ಸುಳಿಯಲ್ಲಿ ಸಿಲುಕಿದ ಅನೇಕ ಮುಖ್ಯಮಂತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ವಾಸ್ತವದಲ್ಲಿ ಭೂ ಸ್ವಾಧೀನ ಎಂದರೆ ಏನು? ಡಿ ನೋಟಿಫಿಕೇಷನ್ ಎಂದರೇನು ? ಭೂ ಸ್ವಾಧೀನ ಪ್ರಕ್ರಿಯೆ ಹೇಗಾಗುತ್ತದೆ? ಸ್ವಾಧೀನಕ್ಕೆ ಒಳಪಟ್ಟ ಜಮೀನು ಬಿಡಿಸಿಕೊಳ್ಳುವ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ.
ಭೂ ಸ್ವಾಧೀನ:
ಸಾಮಾನ್ಯವಾಗಿ ಕೃಷಿ ಜಮೀನುಗಳು ರೈತರ ಒಡೆತನದಲ್ಲಿರುತ್ತವೆ. ಕೃಷಿ ಜಮೀನನ್ನು ಸರ್ಕಾರದ ಸಾರ್ವಜನಿಕ ಉದ್ದೇಶಕ್ಕಾಗಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಯನ್ನು ಭೂ ಸ್ವಾಧೀನ ಎಂದು ಕರೆಯುತ್ತಾರೆ. ಸರ್ಕಾರಿ ಉದ್ದೇಶ ಎಂದರೆ ರಸ್ತೆ ನಿರ್ಮಾಣ, ವಸತಿ ಯೋಜನೆಗಳು, ನದಿ- ಕಾಲುವೆ, ಗೋ ಶಾಲೆ ನಿರ್ಮಾಣ ಯೋಜನೆಗಳಿಗೆ ರೈತರಿಂದ ಜಮೀನುಗಳನ್ನು ಸರ್ಕಾರ ಪಡೆಯುವುದಕ್ಕೆ ಭೂ ಸ್ವಾಧೀನ ಎಂದು ಕರೆಯುತ್ತಾರೆ.
ಭೂ ಸ್ವಾಧೀನದಲ್ಲಿ ಎರಡು ವಿಧ. ಒಂದು ಖಾಯಂ ಸ್ವಾಧೀನ, ಇನ್ನೊಂದು ತಾತ್ಕಾಲಿಕ ಸ್ವಾಧೀನ. ರಸ್ತೆ, ಕಾಲುವೆ, ನದಿ, ವಸತಿ ಯೋಜನೆಗೆ ವಶಪಡಿಸಿಕೊಂಡ ಭೂಮಿ. ಅದೇ ಸರ್ಕಾರದ ಸೋಲಾರ್ ಮತ್ತಿತರ ಪ್ರಾಜೆಕ್ಟ್ , ವಿಂಡ್ ಪವರ್ ಪ್ರಾಜೆಕ್ಟ್ ಗಳಿಗೆ ಇಂತಿಷ್ಟು ವರ್ಷಗಳ ಕಾಲಾವಧಿಗೆ ಸ್ವಾಧೀನ ಪಡಿಸಿಕೊಳ್ಳವುದನ್ನು ತಾತ್ಕಾಲಿಕ ಭೂ ಸ್ವಾಧೀನ ಎಂದು ಕರೆಯುತ್ತೇವೆ.
ಸ್ವಾಧೀನ ಮುನ್ನ ಪ್ರಕ್ರಿಯೆ:
ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಸರ್ಕಾರವು ಒಂದು ಕ್ರಿಯಾ ಯೋಜನೆ ರೂಪಿಸುತ್ತದೆ. ಅದರಲ್ಲಿ ಎಷ್ಟು ಎಕರೆ ಜಮೀನು ಅಗತ್ಯವದೆ. ಯಾವ ಸರ್ವೆ ನಂಬರ್‌ಗಳು ಹೋಗುತ್ತವೆ ಎಂಬ ಮಾಹಿತಿಯನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಲಾಗಿರುತ್ತದೆ. ಅದರಲ್ಲಿ ಸ್ವಾಧೀನಕ್ಕೆ ಒಳಪಡುವ ಜಮೀನುಗಳಿಗೆ ಸ್ಥಳೀಯ ಮಾರುಕಟ್ಟೆ ಮೌಲ್ಯ ಮತ್ತು ಉಪ ನೋಂದಣಾಧಿಕಾರಿಗಳ ಮಾರ್ಗಸೂಚಿ ಮೌಲ್ಯದ ಅನ್ವಯ ದರವನ್ನು ನಿಗದಿ ಪಡಿಸುತ್ತದೆ.
ಆನಂತರ ಭೂ ಸ್ವಾಧೀನ ಸಂಬಂಧ ಸರ್ಕಾರ ಅಥವಾ ಸಕ್ಷಮ ಪ್ರಾಧಿಕಾರ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸುತ್ತದೆ. ಅಧಿಸೂಚನೆ ಹೊರಡಿಸಿದ ಬಳಿಕ ಸಾರ್ವಜನಿಕರ ಆಕ್ಷೇಪಣೆಗಾಗಿ ಕಾಲಮಿತಿಯಲ್ಲಿ ಅವಕಾಶ ನೀಡಿ, ನಿಯತಕಾಲಿಕೆಗಳಲ್ಲಿ ಹಾಗೂ ಸರ್ಕಾರಿ ನೋಟಿಸ್ ಗಳಲ್ಲಿ ಪ್ರಚುರ ಪಡಿಸುತ್ತದೆ. ಸಾರ್ವಜನಿಕ ಆಕ್ಷೇಪಣೆಗಳಿದ್ದರೆ ಸಾರ್ವಜನಿಕರು ಸಲ್ಲಿಸಬಹುದು. ತಕಾರರುಗಳನ್ನು ಸರ್ಕಾರವು ಪರಿಶೀಲಿಸಿ ಸೂಕ್ತ ಸಮುಜಾಯಿಸಿ ನೀಡಿ ಅಂತಿಮ ಆದೇಶ ಹೊರಡಿಸುತ್ತದೆ. ಈ ಪ್ರಾಥಮಿಕ ಅಧಿಸೂಚನೆ ಹೊರಡಿಸುವ ವೇಳೆ ಭೂ ಸ್ವಾಧೀನಕ್ಕೆ ಒಳಗಾಗುವ ಸರ್ವೆನಂಬರ್‌ಗಳ ಮಾಲೀಕರುಗಳಿಗೆ ತಿಳುವಳಿಕೆ ನೋಟಿಸ್ ಅಥವಾ ಪ್ರಾಥಮಿಕ ಅಧಿಸೂಚನೆಯ ವಿವರವನ್ನು ಸಹ ನೀಡುತ್ತದೆ.
ಅದಾದ ಬಳಿಕ ಆಕ್ಷೇಪಗಳನ್ನು ಇತ್ಯರ್ಥ ಪಡಿಸಿ ಎರಡನೇ ಸುತ್ತಿನಲ್ಲಿ ಭೂ ಸ್ವಾಧೀನ ಅಂತಿಮ ಅಧಿಸೂಚನೆ ಹೊರಡಿಸುತ್ತದೆ. ಅಂತಿಮ ಅಧಿಸೂಚನೆ ಬಳಿಕ ಸ್ವಾಧೀನಕ್ಕೆ ಒಳಗಾದ ಜಮೀನಿನ ಮಾಲೀಕರುಗಳಿಗೆ ನಿಗದಿ ಪಡಿಸಿದ ಪರಿಹಾರ ಮೊತ್ತವನ್ನು ನೀಡುತ್ತದೆ. ಒಮ್ಮೆ ಭೂ ಸ್ವಾಧೀನ ಅಂತಿಮ ಆದೇಶಕ್ಕೆ ಒಳಪಟ್ಟು ಜಮೀನನ್ನು ಯಾವ ಉದ್ದೇಶಕ್ಕೆ ಸ್ವಾಧೀನ ಮಾಡಲಾಗಿದೆಯೋ ಅದಕ್ಕೆ ಬಳಸಬೇಕು.
ಡಿನೋಟಿಫಿಕೇಷನ್ ಎಂದರೆ..
ಭೂ ಸ್ವಾಧೀನ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶವಿಲ್ಲ. ಆದರೂ ಸಹ ವಿಶೇಷವಾಗಿ ಕೆಲವು ಸಂದರ್ಭಗಳಲ್ಲಿ ಎಂದರೆ, ಮನೆ ಕಟ್ಟಿದ್ದರೆ, ಕೃಷಿಯೇತರ ಚುಟವಟಿಕೆಗೆ ಒಳಪಟ್ಟಿದ್ದರೆ, ಕೋಳಿಫಾರಂ, ಶಾಲೆ, ಇನ್ನಿತರೆ ವಾಣಿಜ್ಯ ಚುಟವಟಿಕೆಗೆ ಒಳಪಡಿಸಿದ್ದರೆ, ಸೂಕ್ತ ದಾಖಲೆಗಳನ್ನು ನೀಡಿ ಭೂ ಸ್ವಾಧೀನದಿಂದ ಕೈ ಬಿಡುವಂತೆ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ರೈತರು ಮನವಿ ಸಲ್ಲಿಸಬಹುದು. ಪ್ರಾಧಿಕಾರಕ್ಕೆ ರೈತರ ಮನವಿ ತೃಪ್ತಿಯಾದರೆ, ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬಹುದು. ಇದನ್ನೇ ಡಿ ನೋ ಟಿಫಿಕೇಷನ್ ಎಂದು ಕರೆಯುತ್ತೇವೆ.
ಕೆಲವು ಸಂದರ್ಭದಲ್ಲಿ ವಸತಿ ಬಡಾವಣೆಗಳನ್ನು ಸರ್ಕಾರವು ಲಾಭ ರಹಿತ – ನಷ್ಟ ರಹಿತವಾಗಿ ಮಾಡುತ್ತದೆ. ಇನ್ನೂ ಕೆಲವು ಸಂದರ್ಭದಲ್ಲಿ ಸರ್ಕಾರವು ಭೂ ಸ್ವಾಧೀನ ಪಡಿಸಿಕೊಂಡ ಜಮೀನುಗಳಿಗೆ ಸಾಧ್ಯವಿಲ್ಲದ ಪಕ್ಷದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ಸಹ ಭೂ ಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟ ಆಸ್ತಿಗಳ ಪರಿಹಾರ ಪಡೆಯುವ ಸಂದರ್ಭದಲ್ಲಿ ಪರಿಹಾರ ಪಡೆದ ಹಣಕ್ಕೆ ಬೇರೆ ಕಡೆ ಆಸ್ತಿ ಕಡೆ ಆಸ್ತಿ ಖರೀದಿಸಿದರೆ ಸರ್ಕಾರವು ಅಂತಹ ಆಸ್ತಿಗಳಿಗೆ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ಕಂದಾಯ ಹಾಗೂ ಇನ್ನಿತರ ಸರ್ಕಾರಿ ತೆರಿಗೆಗಳ ವಿನಾಯಿತಿ ನೀಡಿದೆ.
ಮೇಲೆ ತಿಳಿಸಿದ ಸಂದರ್ಭ ಹೊರತು ಪಡಿಸಿ ಕೆಲವು ಸಂದರ್ಭಗಳಲ್ಲಿ ಸರಿಯಾದ ಕಾರಣಗಳು ಇಲ್ಲದೇ ಸಹ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವ ಪದ್ಧತಿಯನ್ನು ಡಿ ನೋಟಿಫಿಕೇಷನ್ ಎಂದು ಕರೆಯುತ್ತೇವೆ. ಸಕಾರಣ ಇದ್ದರೆ ಅದನ್ನು ಪರಿಗಣಿಸಿ ಸರ್ಕಾರ ಡಿ ನೋಟಿಫಿಕೇಷನ್ ಮಾಡಬಹದು. ಕೆಲವು ಸಂದರ್ಭದಲ್ಲಿ ಪ್ರಾಥಮಿಕ ಅಧಿಸೂಚನೆಗೆ ಒಳಪಟ್ಟ ಜಮೀನು ಅಂತಿಮ ಅಧಿಸೂಚನೆ ವೇಳೆ ಕೈ ಬಿಟ್ಟ ಪಕ್ಷದಲ್ಲಿ ಸಕ್ಷಮ ಪ್ರಾಧಿಕಾರದಿಂದ ನಿರಪೇಕ್ಷಣಾ ಪ್ರಮಾಣ ಪತ್ರವನ್ನು ಪಡೆದು ಜಮೀನನ್ನು ಮರಳಿ ಸ್ವಾಧೀನಕ್ಕೆ ಪಡೆಯಬಹುದು.
ಭೂ ಸ್ವಾಧೀನಕ್ಕೆ ಒಳಗಾಗುವ ಜಮೀನು ಅಭಿವೃದ್ಧಿ ಬಳಕೆಗೆ ಭೂ ಸ್ವಾಧೀನ ಕಾಯ್ದೆಯಲ್ಲಿ ಕಾಲಮಿತಿ ನಿಗದಿ ಮಾಡಲಾಗಿದೆ. ಒಂದು ವೇಳೆ ಕಾಲಮಿತಿಯಲ್ಲಿ ಆ ಯೋಜನೆಗೆ ಸರ್ಕಾರ ಸದರಿ ಜಮೀನು ಉಪಯೋಗಿಸದಿದ್ದರೆ, ಸಂಬಂಧಪಟ್ಟ ವ್ಯಕ್ತಿಯು ಸಂಬಂಧಪಟ್ಟ ವ್ಯಕ್ತಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಭೂ ಸ್ವಾಧೀನದಿಂದ ಬಿಡಿಸಿಕೊಳ್ಳಬಹುದು. ಇಲ್ಲವೇ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕಿ ಭೂ ಸ್ವಾಧೀನ ಆದೇಶ ರದ್ದು ಪಡಿಸಿ ಮರಳಿ ಜಮೀನನ್ನು ಪಡೆಯಲು ಅವಕಾಶವಿದೆ.