ಬಸವಕಲ್ಯಾಣ (ಬೀದರ್ ಜಿ.): ಜಮೀನಿನ ಮ್ಯುಟೇಶನ್ ಹಾಗೂ ಪಹಣಿಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಬೇಡಿಕೆ ಇಟ್ಟಿದ್ದ ಲಂಚದ ಹಣ ಪಡೆಯುವಾಗ ನಾಡ ತಹಶೀಲ್ದಾರ್ ಶಿವಾನಂದ ಬಿರಾದಾರ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ತಾಲ್ಲೂಕಿನ ಉಜಳಂಬ ಗ್ರಾಮದ ನಿವಾಸಿ ಸುಧೀರ ಮಹಾದೇವ ದೊಂಬೆ ಅವರ ಜಮೀನಿಗೆ ಸಂಬಂಧಿಸಿದ ಮ್ಯುಟೇಶನ್ ಹಾಗೂ ಪಹಣಿಗಾಗಿ ಕೆಲಸ ಮಾಡಿಕೊಡಲು 2.50 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು.ಈ ಮೊತ್ತ ಕಡಿಮೆ ಮಾಡುವಂತೆ ಬೇಡಿದಾಗ ಕೊನೆಗೆ 1,00,000 ರೂಪಾಯಿಗೆ ಲಂಚದ ಮೊತ್ತವನ್ನು ಶಿವಾನಂದ ಇಳಿಕೆ ಮಾಡಿದ್ದರು.ಇದರಂತೆ ಆ 1 ಲಕ್ಷ ರೂಪಾಯಿಯನ್ನು ಸುಧೀರ ಇಂದು ಕೊಡಲು ಹೋಗಿದ್ದರು. ಆದರೆ ಅದಕ್ಕೂ ಮೊದಲೆ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಹೀಗಾಗಿ ಸುಧೀರ ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಇಲ್ಲಿಯ ನಾರಾಯಣಪೂರ ಕ್ರಾಸ್ ಬಳಿ ಮುಂಗಡವಾಗಿ 1 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಶಿವಾನಂದ ಅವರನ್ನು ಲಂಚದ ಹಣದ ಸಹಿತ ಹಿಡಿದು ಕೇಸ್ ದಾಖಲಿಸಿಕೊಂಡಿದ್ದಾರೆ.ಲೋಕಾಯುಕ್ತ ಡಿವೈಎಸ್‌ಪಿ ಎನ್. ಎಂ.ಓಲೇಕಾರ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಿದ್ದಾರೆ. ನಂತರ ತಹಶೀಲ್ ಕಚೇರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.