Revenue Facts

ರಿಯಲ್ ಎಸ್ಟೇಟ್‌ಗೆ ಬೇಡಿಕೆ: ಭೂಮಿ ಖರೀದಿ ಮೂರು ಪಟ್ಟು ಹೆಚ್ಚಿಸಿಕೊಂಡ ಬಿಲ್ಡರ್ಸ್

ರಿಯಲ್ ಎಸ್ಟೇಟ್‌ಗೆ ಬೇಡಿಕೆ: ಭೂಮಿ ಖರೀದಿ ಮೂರು ಪಟ್ಟು ಹೆಚ್ಚಿಸಿಕೊಂಡ ಬಿಲ್ಡರ್ಸ್

ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಬೇಡಿಕೆ ಹೆಚ್ಚಳ ಉಂಟಾಗುತ್ತಿದ್ದಂತೆಯೇ ರಿಯಲ್ ಎಸ್ಟೇಟ್ ಉದ್ಯಮಿಗಳು ಭೂಮಿ ಖರೀದಿಯನ್ನೂ ಮೂರು ಪಟ್ಟು ಹೆಚ್ಚಿಸಿದ್ದಾರೆ. ಬೆಂಗಳೂರು ಸೇರಿದಂತೆ ಎಂಟು ಪ್ರಮುಖ ನಗರಗಳಲ್ಲಿ ಇದೇ ವರ್ಷದ ಜನವರಿಯಿಂದ ಸೆಪ್ಟೆಂಬರ್ ಅವಧಿಯಲ್ಲಿ 68 ಭೂ ಸ್ವಾಧೀನ ಡೀಲ್‌ಗಳು ಪೂರ್ಣಗೊಂಡಿವೆ ಎಂದು ವರದಿಯೊಂದು ಹೇಳಿದೆ.

ಡೆವಲಪರ್‌ಗಳು ಭೂಮಿ ಖರೀದಿ ಮಾಡಿರುವ ಹಾಗೂ ಡೆವಲಪರ್‌ಗಳು ಮತ್ತು ಭೂ ಮಾಲೀಕರು ಮಾಡಿಕೊಂಡಿರುವ ಜಂಟಿ ಅಭಿವೃದ್ಧಿ ಒಪ್ಪಂದ (ಜೆಡಿಎ) ಎರಡನ್ನೂ ಪರಿಗಣಿಸಿ ವರದಿ ಸಿದ್ಧಪಡಿಸಲಾಗಿದೆ.

ʻಎಂಟು ನಗರಗಳಲ್ಲಿ 1,656 ಎಕರೆಗಳ ಕನಿಷ್ಠ 68 ಭೂ ಖರೀದಿ ಒಪ್ಪಂದಗಳು ಪೂರ್ಣಗೊಂಡಿವೆ. ಈ ಪೈಕಿ 9 ವ್ಯವಹಾರಗಳು ಜೆಡಿಎ ಅಥವಾ ಆದಾಯ ಹಂಚಿಕೆ ಮಾದರಿಯದ್ದಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ 20 ಡೀಲ್‌ಗಳು (925 ಎಕರೆಗಳು) ಮಾತ್ರ ಕುದುರಿದ್ದವುʼ ಎಂದು ವರದಿ ಹೇಳಿದೆ.

ಕೋವಿಡ್ ನಂತರದ ಕಾಲದಲ್ಲಿ ಮನೆಗಳಿಗೆ ಹೆಚ್ಚು ಬೇಡಿಕೆ ಕಾಣಸಿಗುತ್ತಿರುವುದರಿಂದ ಮಾರ್ಕೋಟೆಕ್ ಡೆವಲಪರ್ಸ್, ಗೋದ್ರೇಜ್ ಪ್ರಾಪರ್ಟಿಸ್ ಮತ್ತು ಪ್ರೆಸ್ಟೀಜ್‌ನಂತಹ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳು ತಮ್ಮ ಉದ್ಯಮದ ವೇಗವನ್ನು ಹೆಚ್ಚಿಸಿಕೊಂಡಿವೆ.

ʻವಿಸ್ತೀರ್ಣದ ಆಧಾರದಲ್ಲಿ ನೋಡುವುದಾದರೆ ಈ ವರ್ಷದಲ್ಲಿ ಅತಿಹೆಚ್ಚು ಪ್ರಮಾಣದ ಭೂಮಿ ವಹಿವಾಟು ನಡೆದಿದ್ದು ಹೈದರಾಬಾದ್‌ನಲ್ಲಿ. ಸಂಖ್ಯೆ ಆಧಾರದಲ್ಲಿ ಪರಿಗಣಿಸುವುದಾದರೆ ಎಂಎಂಆರ್ (ಮುಂಬೈ ಮಹಾನಗರ ವಲಯ) ಹೆಚ್ಚು ವಹಿವಾಟು ನಡೆದಿದೆʼ ಎಂದು ವರದಿ ಉಲ್ಲೇಖಿಸಿದೆ.

ದೆಹಲಿ-ರಾಷ್ಟ್ರ ರಾಜಧಾನಿ ವಲಯ (ಎನ್‌ಸಿಆರ್) 233.83 ಎಕರೆಗಳನ್ನೊಳಗೊಂಡ 16 ಭೂ ವ್ಯವಹಾರಗಳನ್ನು ದಾಖಲಿಸಿದೆ. ಇದು, ಗುರುಗ್ರಾಮದ 197 ಎಕರೆಗಳ ಒಂಬತ್ತು ಹಾಗೂ ದೆಹಲಿ, ಫರೀದಾಬಾದ್ ಮತ್ತು ನೋಯ್ಡಾಗಳ ಏಳು ವಹಿವಾಟುಗಳನ್ನು ಒಳಗೊಂಡಿದೆ. ಎಂಎಂಆರ್‌ನಲ್ಲಿ ಒಟ್ಟು 198.62 ಎಕರೆಗಳ 17 ವ್ಯವಹಾರ ಕುದುರಿದ್ದರೆ ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟಾರೆ 223.2 ಎಕರೆಗಳ 9 ವಹಿವಾಟು ನೋಂದಣಿ ಆಗಿವೆ.

ಹೈದರಾಬಾದ್‌ನಲ್ಲಿ ನೋಂದಣಿ ಆಗಿರುವುದು ಕೇವಲ ಏಳು ವಹಿವಾಟು. ಆದರೆ, ವಿಸ್ತೀರ್ಣ ಮಾತ್ರ ಬರೋಬ್ಬರಿ 769.25 ಎಕರೆಗಳಷ್ಟು. ಇನ್ನು ಪುಣೆಯಲ್ಲಿ ಎಂಟು ವಹಿವಾಟುಗಳು (123.7 ಎಕರೆ) ಹಾಗೂ ಚೆನ್ನೈನಲ್ಲಿ ಏಳು ವಹಿವಾಟುಗಳನ್ನು (92.21 ಎಕರೆ) ಗುರುತಿಸಲಾಗಿದೆ. ಕೋಲ್ಕತ್ತದಲ್ಲಿ ಕೇವಲ ಒಂದು (5.6 ಎಕರೆ) ಮತ್ತು ಅಹಮದಾಬಾದ್‌ನಲ್ಲಿ ಮೂರು (9.6 ಎಕರೆ) ಭೂಮಿ ವಹಿವಾಟುಗಳು ನಡೆದಿವೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದ ಕುಂದಿದ್ದ ಮನೆಗಳ ಬೇಡಿಕೆ ಮತ್ತೆ ಚೇತರಿಸಿಕೊಂಡಿದೆ. ಬೃಹತ್ ಬಿಲ್ಡರ್‌ಗಳು ಹೊಸ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದ್ದಾರೆ. ವರದಿಯ ಅಂಕಿ ಅಂಶದ ಪ್ರಕಾರ, ಏಳು ಪ್ರಮುಖ ನಗರಗಳನಲ್ಲಿ ಜನವರಿಯಿಂದ ಸೆಪ್ಟೆಂಬರ್‌ವರೆಗೆ 2,72,709 ಮನೆಗಳ ಮಾರಾಟ ನಡೆದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಸಂಖ್ಯೆ 1,45,651 ಇತ್ತು. 2019ರ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿದ್ದ 2,61,358 ಮನೆಗಳ ಮಾರಾಟದ ಅಂಕಿ ಸಂಖ್ಯೆಗಳನ್ನೂ 2022ರ ಅಂಕಿ ಸಂಖ್ಯೆಗಳು ಮೀರಿಸಿವೆ.

Exit mobile version