ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿಯಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಘೋಷಣೆಗೆ ಬರದ ಸಿದ್ಧತೆ ನಡೆಸಿರುವಾಗಲೇ ಬೆಂಗಳೂರಿನ ಕಾಂಗ್ರೆಸ್ ಮುಖಂಡನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಬಿಗ್ ಶಾಕ್ ನೀಡಿದ್ದಾರೆ.ಕಾಂಗ್ರೆಸ್ ಮುಖಂಡ ಗುರಪ್ಪನಾಯ್ಡು ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುರಪ್ಪ ನಾಯ್ಡು ಅವರ ಬೆಂಗಳೂರಿನ ಬನಶಂಕರಿ 2ನೇ ಹಂತದಲ್ಲಿರುವ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.ನಾಳೆಯಿಂದ ಕರ್ನಾಟಕದಲ್ಲಿ ಇಡಿ, ಐಟಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ನಿನ್ನೆಯಷ್ಟೇ (ಏಪ್ರಿಲ್ 4) ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು.
ಕಾಂಗ್ರೆಸ್ ಮುಖಂಡ ಗುರಪ್ಪನಾಯ್ಡು ಮನೆ ಮೇಲೆ ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂರು ವಾಹನಗಳಲ್ಲಿ ಬನಶಂಕರಿ 2ನೇ ಹಂತಕ್ಕೆ ಬಂದ ಐಟಿ ಅಧಿಕಾರಿಗಳು ಗುರಪ್ಪನಾಯ್ಡು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಗುರಪ್ಪ ನಾಯ್ಡು ಜೊತೆ ಗುರುತಿಸಿಕೊಂಡಿದ್ದ ಬಸಪ್ಪ ಎಂಬುವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಸಪ್ಪ ಅವರು ಅವೆನ್ಯೂ ರಸ್ತೆಯಲ್ಲಿ ಜುವೆಲ್ಲರಿ ಶಾಪ್ ಹೊಂದಿದ್ದಾರೆ. ಸದ್ಯ ಗುರಪ್ಪ ಹಾಗೂ ಬಸಪ್ಪ ಮನೆ, ಕಚೇರಿಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿದಿದೆ.