ಬೆಂಗಳೂರು: ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯೊಳಗೆ ಸರ್ಕಾರಿ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸಕಾಲ ಯೋಜನೆಯನ್ನು ಜಾರಿಗೊಳಿಸಿದೆ. ಡಿ.ವಿ. ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಂದರೆ 2012ರ ಎಪ್ರಿಲ್‌ನಲ್ಲಿ ಸಕಾಲ ಜಾರಿಯಾಗಿತ್ತು. ಹೀಗೆ ಯೋಜನೆ ಜಾರಿಯಾಗಿ 10 ವರ್ಷಗಳು ಕಳೆದ ನಂತರ ಪ್ರಮುಖ ಬದಲಾವಣೆಯೊಂದು ಮಾಡಲಾಗಿದೆ.
ಸಕಾಲ ಯೋಜನೆಯಡಿ ಒಟ್ಟಾರೆ 100 ಇಲಾಖೆಗಳು ಮತ್ತು ಸಂಸ್ಥೆಗಳನ್ನು ಸೇರಿಸಲಾಗಿದೆ. 1145 ಸೇವೆಗಳನ್ನು ಈ ಯೋಜನೆಯಡಿ ಕಾಲಮಿತಿಯೊಳಗೆ ಒದಗಿಸಲಾಗುತ್ತದೆ. ಸಕಾಲ ಯೋಜನೆಯಡಿ ಯಾವುದೇ ಉದ್ದೇಶಕ್ಕಾಗಿ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಅವರಿಗೆ ಅಧಿಕೃತ ಸ್ವೀಕೃತಿ ನೀಡುವ ಸಂಬಂಧ ಹೊಸ ಬದಲಾವಣೆಯೊಂದನ್ನು ಮಾಡಲಾಗಿದೆ.
“ಹೆಸರಿಸಲಾದ ಅಧಿಕಾರಿ ಅಥವಾ ಅಧಿಕೃತ ವ್ಯಕ್ತಿಯ ಲಿಖಿತ ರೂಪದಲ್ಲಿ ಅಥವಾ ನಿಯಮಿಸಿದೆಯಲ್ಲಿಅಂಥ ನಮೂನೆಯಲ್ಲಿ ಅರ್ಜಿ ಸ್ವೀಕರಸಿದಾಗ ನಮೂನೆ- ಆ ದಲ್ಲಿ ಅರ್ಜಿದಾರನಿಗೆ ಯುಕ್ತ ಸ್ವೀಕೃತಿ ನೀಡಬೇಕು,” ಎಂದು ಸೂಚಿಸಲಾಗಿದೆ.
ಸಕಾಲದಲ್ಲಿ ಒದಗಿಸಲಾಗುವ ಸೇವೆಗಳಿಗೆ 15 ಅಂಕಿಗಳುಳ್ಳ ಜಿಎಸ್‌ಸಿ ಸಂಖ್ಯೆಯನ್ನು ಒಳಗೊಂಡಿರುವ ಗಣಕೀಕೃತ ಸ್ವೀಕೃತಿಯನ್ನು ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಸಕಾಲ ಮಿಷನ್ ಆಡಳಿತಾಧಿಕಾರಿ ಜಿ. ಮೇಘನಾ ಟಿಪ್ಪಣಿ ಹೊರಡಿಸಿದ್ದಾರೆ.