ಬೆಂಗಳೂರು, ಅ. 19: ಗ್ರಾಹಕರಿಗೆ ಮೋಸ ಮಾಡುವ ರಿಯಲ್ ಎಸ್ಟೇಟ್ ಕಂಪನಿಗಳ ಅಕ್ರಮಗಳಿಗೆ ಮೂಗು ದಾರ ಹಾಕಬೇಕಿದ್ದ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಬಿಲ್ಡರ್ ಗಳ ಪರ ನಿಂತಿರುವ ಆರೋಪ ಕೇಳಿ ಬಂದಿದೆ. ಬಿಲ್ಡರ್ ನಿಂದ ವಂಚನೆಗೆ ಒಳಗಾಗಿದ್ದ ಇಬ್ಬರು ವ್ಯಕ್ತಿಗಳು ಕೆ ರೇರಾದಲ್ಲಿ ದೂರು ದಾಖಲಿಸಿದ್ದರು. ಎರಡೂ ದೂರುಗಳಲ್ಲಿ ಗ್ರಾಹಕರಿಗೆ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣಾ ಪ್ರಾಧಿಕಾರದ ಮುಖ್ಯಸ್ಥರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.
ಮಂತ್ರಿ ಡೆವಲಪರ್ಸ್ ನಲ್ಲಿ ಪ್ಲಾಟ್ ಖರೀದಿ ಮಾಡಿದ್ದ ಧನಂಜಯ ಪದ್ಮಾಚಾರ್ ಎಂಬುವರು ಕೆ ರೇರಾ ಅಧ್ಯಕ್ಷರಾಗಿರುವ ಐಪಿಎಸ್ ಅಧಿಕಾರಿ ಎಚ್.ಸಿ. ಕಿಶೋರ್ ಚಂದ್ರ ವಿರುದ್ಧ ದೂರು ನೀಡಿದ್ದಾರೆ. ಮಂತ್ರಿ ಡೆವಲಪರ್ಸ್ 2013 ರಲ್ಲಿ ಪ್ರಾರಂಭಿಸಿದ ಮಂತ್ರಿ ಸೆರೆನಿಟಿ ಪ್ರಾಜೆಕ್ಟ್ ನಲ್ಲಿ ಪ್ಲಾಟ್ ಖರೀದಿ ಮಾಡಿದ್ದೆ. 2016 ರೊಳಗೆ ಪ್ಲಾಟ್ ಕೊಡಬೇಕಿತ್ತು. ಕೆಲ ಕಾಲದ ನಂತರ ಕೊಡಬಹುದು ಎಂದು ಭಾವಿಸಿ ಸುಮ್ಮನಾಗಿದ್ದೆ. ಕೊಡದ ಹಿನ್ನೆಲೆಯಲ್ಲಿ ತನಗೆ ಆದ ಅನ್ಯಾಯದ ಬಗ್ಗೆ ನ್ಯಾಯ ಕೋರಿ ಕರ್ನಾಟಕ ರೇರಾದಲ್ಲಿ 2020 ರಲ್ಲಿ ದೂರು ನೀಡಿದೆ. ಎರಡು ವರ್ಷವಾದರೂ ನನ್ನ ದೂರಿಗೆ ಪ್ರತಿ ಸ್ಪಂದನೆ ಸಿಗಲಿಲ್ಲ. ರೇರಾ ಪೋರ್ಟ್ ಲ್ ನಲ್ಲಿ 30 ದೂರು ಸಲ್ಲಿಸಿದೆ. ಅದಕ್ಕೂ ಯಾವುದೇ ಸ್ಪಂದನೆ ಸಿಗಲಿಲ್ಲ.
ರಾಷ್ಟ್ರೀಯ ಗ್ರಾಹಕ ವೇದಿಕೆ ನ್ಯಾಯಾಲಯದಲ್ಲಿ ದೂರು ಸಲ್ಲಿಸಲು ನಿರ್ಧರಿಸಿ ನನ್ನ ದೂರನ್ನು ವಾಪಸು ಪಡೆಯಲು ರೇರಾಗೆ ಅರ್ಜಿ ಸಲ್ಲಿಸಿದೆ. ದೂರು ವಾಪಸು ಹಿನ್ನೆಲೆಯಲ್ಲಿ ಕರ್ನಾಟಕ ರೇರಾ ಅಧ್ಯಕ್ಷ ರು ನನ್ನ ದೂರನ್ನು ಇತ್ಯರ್ಥ ಪಡಿಸಿ ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲ, ಸುಳ್ಳು ದೂರು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಹೀಗಾಗಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದೇನೆ ಎಂದು ದೂರುದಾರರು ಆಂಗ್ಲ ಮಾಧ್ಯಮ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ದೂರಿನೊಂದಿಗೆ ಹಲವು ದಾಖಲೆಗಳನ್ನು ಸಲ್ಲಿಸಿದ್ದೇನೆ. ರೇರಾ ಅಧ್ಯಕ್ಷರು ಗ್ರಾಹಕರ ವಿರೋಧಿಯಾಗಿ ನೀಡುತ್ತಿರುವ ತೀರ್ಪುಗಳನ್ನು ಪರಮಾರ್ಶಿಸಿ ತನಿಖೆ ನಡೆಸುವಂತೆ ಕೋರಿದ್ದೇನೆ. ಸತ್ಯಾಂಶಗಳನ್ನು ಪರಿಗಣಿಸದೇ ಮನಸೋ ಇಚ್ಛೆ ನೀಡುತ್ತಿರುವ ತೀರ್ಪುಗಳ ಬಗ್ಗೆ ತನಿಖೆಯಾಗಬೇಕು. ಕೆ ರೇರಾ ದಿಂದ ಜನರಿಗೆ ಯಾವ ನ್ಯಾಯವೂ ಸಿಗುತ್ತಿಲ್ಲ. ಇದರಿಂದ ಮೋಸ ಹೋದ ಗ್ರಾಹಕರು ಅತಂತ್ರರಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇದೇ ರೀತಿ ಶೈಲೇಶ್ ಚರಾಟಿ ಎಂಬ ವ್ಯಕ್ತಿ ಸಹ ರೇರಾ ಅಧ್ಯಕ್ಷರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಸದಸ್ಯರಾದ ನೀಲಮಣಿ ರಾಜು ( ಮಾಜಿ ಡಿಜಿಪಿ) ಸದಸ್ಯ ವಿಷ್ಣುವರ್ಧನ್ ರೆಡ್ಡಿ ವಿರುದ್ಧ ಸಹ ದೂರು ನೀಡಿದ್ದಾರೆ.
ಆರ್ಯ ಗೃಹ ಪ್ರೆ. ಲಿ. ಅವರು ಆರ್ಯ ಅಂಸ ಅಪಾರ್ಟ್ ಮೆಂಟ್ ನಲ್ಲಿ ಪ್ಲಾಟ್ ಗಳ ಮಾರಾಟದ ಬಗ್ಗೆ ನಾನು ಜಾಹೀರಾತು ನೋಡಿದೆ. ಒಂದೇ ಜಾಗದಲ್ಲಿ ಎರಡು ಪ್ರಾಜೆಕ್ಟ್ ನ್ನು ಉಲ್ಲೇಖಿಸಿ ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ ನಾನು ರೇರಾಗೆ ದೂರು ಸಲ್ಲಿಸಿದ್ದೆ. ಆದೇಶವನ್ನು ಮುಂದೂಡಿದ್ದರು. ಮೇ. 06 ರಂದು ರೇರಾ ನೀಡಿರುವ ಆದೇಶ ನೋಡಿ ಗಾಬರಿಯಾದೆ. ನಾನು ದೂರಿನಲ್ಲಿ ಉಲ್ಲೇಖಿಸಿದ್ದ ಒಂದು ಅಂಶವನ್ನು ಪರಿಗಣಿಸದೇ ತೀರ್ಪು ನಿಡಿದ್ದಾರೆ. ನಾನು ಕೊಟ್ಟಿದ್ದ 28 ದಾಖಲೆಗಳ ಪೈಕಿ ಒಂದನ್ನು ಸಹ ಪ್ರಾಧಿಕಾರ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೇನೆ ಎಂದು ಶೈಲೇಶ್ ತಿಳಿಸಿದ್ದಾರೆ.
