Revenue Facts

ಸಾರ್ವಜನಿಕ ಆಸ್ತಿ ಸಂರಕ್ಷಣೆ ಬಗ್ಗೆ ಸಿಎಂ ಬೊಮ್ಮಾಯಿ ಬೇಸರ

ಸಾರ್ವಜನಿಕ ಆಸ್ತಿ ಸಂರಕ್ಷಣೆ ಬಗ್ಗೆ ಸಿಎಂ ಬೊಮ್ಮಾಯಿ ಬೇಸರ

ಬೆಂಗಳೂರು, ಫೆ. 25 : ಬಿಡಿಎ, ಬಿಬಿಎಂಪಿ ಸೇರಿದಂತೆ ಸಾರ್ವಜನಿಕ ಆಸ್ತಿ ಸಂರಕ್ಷಣೆಗೆ ವಿಚಾರ ಕೋರ್ಟ್‌ ನಲ್ಲಿ ಕೇಸ್‌ ನಡೆಯುತ್ತಿದೆ. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಸಾರ್ವಜನಿಕ ಆಸ್ತಿ ಸಂರಕ್ಷಣೆ ಸಂಬಂಧ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲವಾಗುತ್ತಿದ್ದೇವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಸಾರ್ವಜನಿಕ ಆಸ್ತಿ ಸಂರಕ್ಷಣೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಅವರು, ದೇವರ ಚಿಕ್ಕನಹಳ್ಳಿ ಬಳಿ ನಿರ್ಮಿಸಿದ ಬಿಡಿಎ ಬಡಾವಣೆ ನಿವೇಶನಗಳನ್ನು ಹಂಚಲಾಗುವುದು. ಈ ಹಂಚಿಕೆ ರದ್ದು ಮಾಡಲು ಅವಕಾಶ ಕೊಡುವುದಿಲ್ಲ. ಈಗಾಗಲೇ ಭೂಸ್ವಾಧೀನ, ಬಡಾವಣೆ ನಿರ್ಮಾಣದ ವಿಚಾರದಲ್ಲಿ ಸಾಕಷ್ಟು ನ್ಯೂನತೆಗಳು ಪತ್ತೆಯಾಗಿವೆ. ಅಧಿಕಾರಿಗಳು ಕೋರ್ಟ್‌ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಿದೆ. ಖಾಸಗಿಯವರ ಜತೆ ಶಾಮೀಲಾದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕೆಲವು ಪ್ರಕರಣಗಳಲ್ಲಿ ಸರ್ಕಾರಿ ಆಸ್ತಿಗಳನ್ನು ರಕ್ಷಿಸಲು ನ್ಯಾಯಾಲಯಗಳಲ್ಲಿ ಯಾವುದೇ ಸರಿಯಾದ ವಾದಗಳನ್ನು ಮಾಡಲಾಗಿಲ್ಲ. ಸರ್ಕಾರಿ ಆಸ್ತಿಗಳನ್ನು ಉಳಿಸಲು ಗಂಭೀರತೆಯ ಕೊರತೆಯಿದೆ ಮತ್ತು ಈ ರೀತಿಯ ನಿರ್ಲಕ್ಷ್ಯವು 1990 ರಿಂದಲೂ ಇದೆ. ಕೆಲವು ಸರ್ಕಾರಿ ಆಸ್ತಿಗಳನ್ನು ಉದ್ದೇಶಪೂರ್ವಕವಾಗಿ ಡಿನೋಟಿಫೈ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು ದಕ್ಷಿಣ ತಾಲೂಕಿನ ದೇವರ ಚಿಕ್ಕನಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಬಡಾವಣೆ ನಿರ್ಮಾಣದ ಉದ್ದೇಶದಿಂದ ಕಳೆದ 40 ವರ್ಷಗಳಿಂದ ಬಾಕಿ ಉಳಿದಿರುವ ಜಮೀನಿಗೆ ಸಂಬಂಧಿಸಿದಂತೆ ಗೌಡರ ಪ್ರಶ್ನೆಯಾಗಿತ್ತು. ವಿಳಂಬದ ಬಗ್ಗೆ ತನಿಖೆ ನಡೆಸುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

Exit mobile version