Revenue Facts

ಬೆಂಗಳೂರಿನಲ್ಲಿ ‘ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ’ ವಂತಿಕೆ ಇಳಿಕೆ

ಬೆಂಗಳೂರಿನಲ್ಲಿ ‘ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ’ ವಂತಿಕೆ ಇಳಿಕೆ

ಬೆಂಗಳೂರು: ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆಯಡಿ ಮನೆಗಾಗಿ ನೀವು ಅರ್ಜಿ ಸಲ್ಲಿಸಿದ್ದೀರಾ ಎಂದಾದರೆ ನಿಮಗೊಂದು ಇಲ್ಲಿ ಒಳ್ಳೆಯ ಸುದ್ದಿ ಇದೆ. ಬೆಂಗಳೂರಿನಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಡಿ ನಿರ್ಮಿಸುತ್ತಿರುವ ಮನೆಗಳಿಗೆ ಫಲಾನುಭವಿಗಳ ವಂತಿಕೆ ಕಡಿಮೆ ಮಾಡಿದೆ.

ಬೆಂಗಳೂರಿನಲ್ಲಿ ನಿರ್ಮಿಸುತ್ತಿರುವ ವಸತಿ ಯೋಜನೆಗಳಿಗೆ ಸಂಬಂಧಿಸದಿಂತೆ ಫಲಾನುಭವಿಗಳ ವಂತಿಕೆ ಕಡಿಮೆ ಮಾಡಿರುವ ಸಂಬಂಧ ವಸತಿ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

ಒಂದು ಮನೆ ನಿರ್ಮಾಣಕ್ಕೆ 10.90 ಲಕ್ಷ ರೂ. ಘಟಕ ವೆಚ್ಚ ನಿಗದಿ ಮಾಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು 7.10 ಲಕ್ಷ ರೂ. ಪಾವತಿ ಮಾಡಬೇಕಾಗಿತ್ತು ಅದನ್ನು 6 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇತರೆ ವರ್ಗದವರು 7.90 ಲಕ್ಷ ರೂ. ಪಾವತಿಸಬೇಕಿತ್ತು. ಅದನ್ನು 6.50 ಲಕ್ಷ ರೂ.ಗಳಿಗೆ ನಿಗದಿ ಮಾಡಲಾಗಿದೆ ಎಂದು ಸಚಿವ ಸೋಮಣ್ಣ ವಿವರಿಸಿದ್ದಾರೆ.

ಒಂದು ಮನೆ ನಿರ್ಮಾಣಕ್ಕೆ ತಗಲುವ 10.90 ಲಕ್ಷ ರೂ. ಘಟಕ ವೆಚ್ಚದಲ್ಲಿ 8.81 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕೆ ಮತ್ತು 2.09 ಲಕ್ಷ ರೂ.ಗಳನ್ನು ಮೂಲಸೌಕರ್ಯಗಳಿಗೆ ಖರ್ಚು ಮಾಡಲಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳನ್ನು ನಾಲ್ಕು ಮಹಡಿಗೆ ಸೀಮಿತಗೊಳಿಸಲಾಗಿದೆ ಎಂದು ಹೇಳಿದರು.

35 ಸಾವಿರ ಅರ್ಜಿಗಳು ಬಂದಿವೆ:
ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆಯಡಿ ಮೊದಲ ಹಂತದಲ್ಲಿ 50 ಸಾವಿರ ಮನೆಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಒಂದು ಮತ್ತು ಎರಡು ಬಿಎಚ್‌ಕೆ ಮನೆಗಳಿಗಾಗಿ ಕರೆಯಲಾದ ಅರ್ಜಿಯಲ್ಲಿ ಇದುವರೆಗೆ 35 ಸಾವಿರ ಅರ್ಜಿಗಳು ಬಂದಿವೆ ಎಂದು ಸಚಿವ ಸೋಮಣ್ಣ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 10 ಲಕ್ಷ ಮನೆಗಳ ನಿರ್ಮಿಸುವ ಗುರಿ ಹೊಂದಿತ್ತು. ಇದರಲ್ಲಿ ಈಗಾಗಲೇ 5 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಿದೆ. ಇನ್ನೂ 3.5 ಲಕ್ಷ ಮನೆಗಳ ಕಾಮಗಾರಿ ನಿರ್ಮಾಣ ಹಂತದಲ್ಲಿವೆ. ಮುಂದಿನ ಮಾರ್ಚ್‌ ವೇಳೆಗೆ 5 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಒಟ್ಟಾರೆ ಮನೆ ನಿರ್ಮಾಣಕ್ಕೆ 5 ಸಾವಿರ ಕೋಟಿ ರೂ ಅಗತ್ಯವಿತ್ತು. ಸದ್ಯ ಇಲಾಖೆಯಲ್ಲಿ 2 ಸಾವಿರ ಕೋಟಿಯಷ್ಟು ಅನುದಾನ ಉಳಿದಿದೆ ಎಂದು ಸಚಿವ ಸೋಮಣ್ಣ ವಿವರಿಸಿದರು.

Exit mobile version