Revenue Facts

ಕಾವೇರಿ ವಿವಾದ : ಇಂದು ರಾಜ್ಯ ಸರ್ಕಾರದಿಂದ ಸರ್ವಪಕ್ಷ ಸಭೆ

ಕಾವೇರಿ ವಿವಾದ : ಇಂದು ರಾಜ್ಯ ಸರ್ಕಾರದಿಂದ ಸರ್ವಪಕ್ಷ ಸಭೆ

ಬೆಂಗಳೂರು;ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ 12:30ಕ್ಕೆ ವಿಶೇಷ ಸರ್ವಪಕ್ಷ ಸಭೆ ನಡೆಯಲಿದೆ.ವಿಪಕ್ಷಗಳ ಸದನ ನಾಯಕರು, ಕಾವೇರಿ ಜಲಾನಯನ ಕ್ಷೇತ್ರಗಳ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಮಾಜಿ ಸಿಎಂಗಳಿಗೆ ಸಭೆಗೆ ಬರುವಂತೆ ಆಹ್ವಾನಿಸಿದ್ದಾರೆ.ಕರ್ನಾಟಕಕ್ಕೆ ಕಾವೇರಿ ಸಂಕಷ್ಟ ಎದುರಾಗಿದೆ. ಮಳೆ ಕೊರತೆಯಿಂದ ಕಾವೇರಿ ನದಿಪಾತ್ರದ ಜಲಾಶಯಗಳಲ್ಲಿ ನೀರಿನ ಪ್ರಮಾಣ ತಗ್ಗುತ್ತಿರುವ ಆತಂಕದ ಮಧ್ಯೆಯೂ ತಮಿಳು ನಾಡಿಗೆ ಮುಂದಿನ 15 ದಿನ ಮತ್ತೆ ನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ.

ದೆಹಲಿಯಲ್ಲಿ ಸಮಿತಿಯ ಸದಸ್ಯರು ಮಂಗಳವಾರ ಮಧ್ಯಾಹ್ನ ನಡೆಸಿದ ವರ್ಚುವಲ್‌ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ನಡುವೆ ರಾಜ್ಯದಲ್ಲಿ ಈಗಾಗಲೇ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ 21 ಸಾವಿರ ಟಿಎಂಸಿಗೆ ಇಳಿದಿದೆ.ರಾಜ್ಯದಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ತಮಿಳುನಾಡಿಗೆ 5 ಸಾವಿರ ಕುಸೆಕ್‌ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚಿಸಿದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸ್ವಾಮಿ, ಎಚ್.ಸಿ.ಮಹದೇವಪ್ಪ, ಬಿ.ನಾಗೇಂದ್ರ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಕೆ.ಗೋವಿಂದರಾಜು, ‘ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ, ಹೆಚ್ಚುವರಿ ಮುಖ್ಯ ಕಾರ್ಯ -ದರ್ಶಿ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಬುಧವಾರ ಮಧ್ಯಾಹ್ನ 12.30ಕ್ಕೆ ಸಮ್ಮೇಳನ ಸಭಾಂಗಣದಲ್ಲಿ ತುರ್ತು ಸಭೆ ಕರೆಯಲು ನಿರ್ಧರಿಸಿದ್ದಾರೆ.

Exit mobile version