Revenue Facts

ತಮಿಳುನಾಡು ರಿಯಲ್ ಎಸ್ಟೇಟ್‌ನಲ್ಲಿ ಬೂಮ್: ಆಸ್ತಿ ನೋಂದಣಿಯಲ್ಲಿ ಶೇ 52ರಷ್ಟು ಹೆಚ್ಚಳ

ತಮಿಳುನಾಡು ರಿಯಲ್ ಎಸ್ಟೇಟ್‌ನಲ್ಲಿ ಬೂಮ್: ಆಸ್ತಿ ನೋಂದಣಿಯಲ್ಲಿ ಶೇ 52ರಷ್ಟು ಹೆಚ್ಚಳ

ತಮಿಳುನಾಡಿನ ಕೊಯಮತ್ತೂರು ವಲಯದಲ್ಲಿ ಕಳೆದ ಒಂದು ವರ್ಷದಿಂದ ರಿಯಲ್‌ ಎಸ್ಟೇಟ್‌ ಹಾಗೂ ಪ್ರಾಪರ್ಟಿ ಮಾರ್ಕೆಟ್‌ಗಳು ಹೊಸ ಲಯಕ್ಕೆ ಬಂದಿದ್ದು, ಲಾಭದ ಹಾದಿಯಲ್ಲಿವೆ. ಕಳೆದ ವರ್ಷದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದ ಆರಂಭದ ಐದು ತಿಂಗಳಲ್ಲಿಯೇ ಈ ವಲಯದ ನೋಂದಣಿ ವಿಭಾಗದಲ್ಲಿ ಆಸ್ತಿ ರಿಜಿಸ್ಟ್ರೇಷನ್‌ ಆದಾಯವು ಶೇಕಡ 52ರಷ್ಟು ಏರಿಕೆ ಕಂಡಿದೆ.

ಕೊಯಮತ್ತೂರು ವಲಯವು ಕೊಯಮತ್ತೂರು, ತಿರುಪ್ಪೂರು, ಈರೋಡ್‌ ಹಾಗೂ ನೀಲಗಿರಿ ರೆವೆನ್ಯೂ ಜಿಲ್ಲೆಗಳನ್ನು ಹೊಂದಿದ್ದು, ಈ ವಲಯದಲ್ಲಿ 2021ರ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ₹734.65 ಕೋಟಿ ಸಂಗ್ರಹವಾಗಿತ್ತು. ಈ ವರ್ಷ ಅದೇ ಹಣಕಾಸು ಅವಧಿಯಲ್ಲಿ ₹1,120 ಕೋಟಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಮಾರ್ಚ್‌ 2023ಕ್ಕೆ ಅಂತ್ಯಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಡಾಕ್ಯುಮೆಂಟ್‌ ರಿಜಿಸ್ಟ್ರೇಷನ್‌ನಿಂದ ಒಟ್ಟು ₹3, 476 ಕೋಟಿ ಸಂಗ್ರಹವಾಗುವ ಗುರಿಯನ್ನು ಹೊಂದಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಹಣಕಾಸು ವರ್ಷ (2021–22)ರಲ್ಲಿ ₹2,278 ಕೋಟಿ ಗುರಿಯನ್ನು ಹೊಂದಲಾಗಿತ್ತು. ಅದರಲ್ಲಿ ಶೇಕಡ 85ರಷ್ಟು ಗೆಲುವು ಸಾಧಿಸಿದ್ದು, ₹2,355 ಕೋಟಿ ಸಂಗ್ರಹವಾಗಿತ್ತು.

ಈ ವರ್ಷ ಕೊಯಮತ್ತೂರು ಜಿಲ್ಲೆಯೊಂದರಿಂದಲೇ ₹2.020 ಕೋಟಿ ಸಂಗ್ರಹ ಗುರಿ ಹೊಂದಲಾಗಿತ್ತು. ಈಗಾಗಲೇ ಆರಂಭದ ಐದು ತಿಂಗಳಲ್ಲಿ ಈ ವಲಯದಲ್ಲಿ ಶೇಕಡ 77ರಷ್ಟು ಗುರಿ ಸಾಧಿಸಲಾಗಿದೆ.
ಸಾಮಾನ್ಯ ವಾರದಲ್ಲಿ ಈ ವಲಯದಲ್ಲಿ ಶೇಕಡ 55ರಿಂದ ಶೇಕಡ 60 ಕೋಟಿ ಆದಾಯವನ್ನು ಗಳಿಸುತ್ತದೆ. ಈ ಆದಾಯವು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಈ ವರ್ಷದಲ್ಲಿ ಹೆಚ್ಚು ಅಪಾರ್ಟ್‌ಮೆಂಟ್‌ಗಳು ಹಾಗೂ ಲೇಔಟ್‌ಗಳ ನೋಂದಣಿಯಿಂದ ಅತಿ ಹೆಚ್ಚು ಆದಾಯ ಸಂಗ್ರಹವಾಗಿದೆ ಎನ್ನಲಾಗಿದೆ.

ಈ ಆರ್ಥಿಕ ವರ್ಷದಲ್ಲಿ ಇನ್ನೂ ಏಳು ತಿಂಗಳುಗಳು ಬಾಕಿಯಿದ್ದು, ರಿಯಲ್‌ ಎಸ್ಟೇಟ್‌ ಹಾಗೂ ಪ್ರಾಪರ್ಟಿ ಮಾರ್ಕೆಟ್‌ ವಲಯದಲ್ಲಿ ನಿರೀಕ್ಷಿತ ಆದಾಯ ಸಂಗ್ರಹ ಗುರಿಯನ್ನು ಸಾಧಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version