Revenue Facts

ಇಂದು ಉದ್ಘಾಟನೆಯಾದ ಬೆಂಗಳೂರು ವಿಮಾನ ನಿಲ್ದಾಣದ ಅತ್ಯದ್ಭುತವಾದ ಟರ್ಮಿನಲ್‌ 2

ಇಂದು ಉದ್ಘಾಟನೆಯಾದ ಬೆಂಗಳೂರು ವಿಮಾನ ನಿಲ್ದಾಣದ ಅತ್ಯದ್ಭುತವಾದ ಟರ್ಮಿನಲ್‌ 2

ಬೆಂಗಳೂರು: ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್‌ 2 ಶುಕ್ರವಾರ ಭವ್ಯವಾಗಿ ಉದ್ಘಾಟನೆಗೊಂಡಿದ್ದು, ಈ ಹಿನ್ನೆಲೆಯಲ್ಲಿ ಟರ್ಮಿನಲ್‌ 2ನ ಛಾಯಾಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿನ ಈ ನೂತನ ಟರ್ಮಿನಲ್‌ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು.

ಟರ್ಮಿನಲ್‌ 2 ( T2) ಉದ್ಘಾಟನೆಯೊಂದಿಗೆ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ, ಚೆಕ್‌ಇನ್‌ ಸಾಮರ್ಥ್ಯ ಹಾಗೂ ಇಮಿಗ್ರೇಶನ್‌ ಸಾಮರ್ಥ್ಯವು ದ್ವಿಗುಣಗೊಳ್ಳಲಿದೆ. ಇದರಿಂದ ಪ್ರಯಾಣಿಕರಿಗೆ ಸಹಾಯವಾಗಲಿದೆ.

ಸುಮಾರು 5000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಟರ್ಮಿನಲ್‌ ವಾರ್ಷಿಕವಾಗಿ ಸುಮಾರು 5.6 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಲಿದೆ. ಈ ಮೊದಲು ಇಲ್ಲಿಯ ಸಾಮರ್ಥ್ಯ ಕೇವಲ 2.5 ಕೋಟಿಯಷ್ಟಾಗಿತ್ತು.
ನೂತನವಾಗಿ ನಿರ್ಮಾಣಗೊಂಡಿರುವ ಟರ್ಮಿನಲ್‌ 2 ಅನ್ನು ಉದ್ಯಾನನಗರಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನ ಗೌರವಾರ್ಥವಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಇಲ್ಲಿಗೆ ಬರುವ ಪ್ರಯಾಣಿಕರಿಗೆ ʼಉದ್ಯಾನದಲ್ಲಿ ನಡಿಗೆʼ ಮಾಡಿದ ಅನುಭವ ದೊರೆಯಲಿದೆ.

ಟರ್ಮಿನಲ್‌ 2ರಲ್ಲಿ ಪ್ರಯಾಣಿಕರು ಸುಮಾರು 10000ಕ್ಕೂ ಹೆಚ್ಚು ಚದರ ಮೀಟರ್‌ ವ್ಯಾಪ್ತಿಯಲ್ಲಿ ಪ್ರಯಾಣ ಮಾಡುತ್ತಾರೆ. ದಾರಿಯುದ್ದಕ್ಕೂ ಹಸಿರು ಗೋಡೆ, ಹ್ಯಾಗಿಂಗ್‌ ಉದ್ಯಾನ, ಹೊರಾಂಗಣ ಉದ್ಯಾನಗಳು ಮನಸ್ಸಿಗೆ ಆಹ್ಲಾದ ನೀಡಲಿವೆ. ಈ ಉದ್ಯಾನವನ್ನು ಸ್ಥಳೀಯ ತಂತ್ರಜ್ಞಾನ ಬಳಸಿಕೊಂಡು ಭಾರತದಲ್ಲಿಯೇ ವಿಶೇಷವಾಗಿ ಮಾಡಲಾಗಿದೆ.

ಬೆಂಗಳೂರು ನಿಲ್ದಾಣವು ಈಗಾಗಲೇ ಪರಿಸರಸ್ನೇಹಿ ವಸ್ತುಗಳ ಬಳಕೆಯಿಂದಾಗಿ ಜನಪ್ರಿಯತೆ ಗಳಿಸಿದೆ. ನೂರಕ್ಕೆ ನೂರರಷ್ಟು ನವೀಕರಿಸಬಹುದಾದ ವಸ್ತುವನ್ನು ಬಳಸಿಕೊಂಡು ಸುಸ್ಥಿರ ಮಾನದಂಡವನ್ನು ಸ್ಥಾಪಿಸಿದೆ. ಈಗಲೂ ಅಷ್ಟೇ ಪರಿಸರ ಸ್ನೇಹಿ ಚಿಂತನೆಯನ್ನೇ ವಿನ್ಯಾಸದಲ್ಲಿ ಕಟ್ಟಿಕೊಡಲಾಗಿದೆ.

ಬೆಂಗಳೂರು ನಗರವನ್ನು ಸ್ಥಾಪಿಸಿದ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಗುವುದು. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ದೇವನಹಳ್ಳಿಯಲ್ಲಿರುವ ಬೆಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.

ನವೆಂಬರ್‌ 11ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಕೆಂಪೇಗೌಡರ ಬೃಹತ್‌ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ಗೃಹ ಸಚಿವ ಅರಗ ಜ್ಞಾನೇಂದ್ರ ಮಂಗಳವಾರ ಬೆಂಗಳೂರು ವಿಮಾನ ನಿಲ್ದಾಣದ ಪ್ರತಿಮೆ ಸ್ಥಾಪಿಸಿರುವ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ʼ2019ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ʼಸಮೃದ್ಧಿಯ ಪ್ರತಿಮೆʼ ನಿರ್ಮಾಣದ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ತಾವು ಅಧಿಕಾರ ಸ್ವೀಕರಿಸಿದ ನಂತರ ಈ ಪರಿಕಲ್ಪನೆಯ ಸಾಕಾರಕ್ಕೆ ಒತ್ತುಕೊಟ್ಟರು. ನಾನು ಈ ಇಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆʼ ಎಂದು ರಾಜ್ಯ ಆರೋಗ್ಯ ಸಚಿವ ಕೆ.ಸುಧಾಕರ್‌ ಮಾಧ್ಯಮಕ್ಕೆ ತಿಳಿಸಿದರು.

ಬೆಂಗಳೂರು ಅಭಿವೃದ್ಧಿಯಲ್ಲಿ ಕೆಂಪೇಗೌಡರ ಕೊಡುಗೆ ಅಪಾರ. ಅವರು ಈ ನಗರವನ್ನು ಸ್ಥಾಪಿಸಿದರು ಹೀಗಾಗಿ ಈ ಪ್ರತಿಮೆಗೆ ಸಮೃದ್ಧಿಯ ಪ್ರತಿಮೆ ಎಂದು ಹೆಸರಿಡಲಾಗಿದೆ.

ಬೆಂಗಳೂರಿಗೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ 25 ಲಕ್ಷ ಹಾಗೂ 100 ಕೌಂಟರ್‌ಗಳ ಸಾಮರ್ಥ್ಯದ ಹೊಸ ಟರ್ಮಿನಲ್‌ ಅನ್ನು ಸ್ಥಾಪಿಸುವುದು ಅಗತ್ಯವಾಯಿತು.

ನಗರದ ಭೇಟಿ ಸಂದರ್ಭದಲ್ಲಿ ನಗರದ ಎಸ್‌ಬಿಸಿ ರೈಲು ನಿಲ್ದಾಣದಿಂದ ವಂದೇ ಭಾರತ (ಚೆನ್ನೈ-ಮೈಸೂರು-ಬೆಂಗಳೂರು) ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಅತಿವೇಗದ ರೈಲು ಸೇವೆ ಕರ್ನಾಟಕ ಜನರ ಬಹುದಿನಗಳ ಬೇಡಿಕೆಯಾಗಿತ್ತು. ನವೆಂಬರ್‌ 11ರಂದು ಪ್ರಧಾನಿ ಮೋದಿ ತಮ್ಮ ಭೇಟಿಯ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಸಚಿವರು ಹಾಗೂ ಬಿಜೆಪಿ ನಾಯಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.““““

Exit mobile version