ಬೆಂಗಳೂರು, ಮಾ. 30 : ಸ್ವಂತ ಮನೆಯನ್ನು ಖರೀದಿಸಲು ಗೃಹ ಸಾಲ ಮಾಡುವುದು ಸಮಾನ್ಯವಾಗಿಬಿಟ್ಟಿದೆ. ಆದರೆ, ಆತುರಕ್ಕೆ ಬಿದ್ದು, ಗೃಹ ಸಾಲ ಮಾಡುವಾಗ ಸಾಕಷ್ಟು ತಪ್ಪುಗಳು ಕೂಡ ನಡೆಯುತ್ತವೆ. ಹಾಗೆ ತಪ್ಪುಗಳು ನಡೆಯಬಾರದು ಎಂದರೆ, ಈ ಕೆಳಗಿನ ಕೆಲ ಅಂಶಗಳನ್ನು ಗಮನಿಸಿ, ನೀವು ಗೃಹಸಾಲ ತೆಗೆದುಕೊಳ್ಳುವಾಗ ನಿಮಗೆ ಉಪಯೋಗಕ್ಕೆ ಬರುತ್ತದೆ.
ಗೃಹಸಾಲಕ್ಕಾಗಿ ನೂರೆಂಟು ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬೇಡಿ. ಹೀಗಾಗಿ ಹೆಚ್ಚೆಚ್ಚು ಅರ್ಜಿಗಳನ್ನು ಸಲ್ಲಿಸಿದಾಗ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾಲಕ್ಕಾಗಿ ಬ್ಯಾಂಕ್ ಅರ್ಜಿ ಸಲ್ಲಿಸಿದಾಗ, ಸಾಲ ಮಂಜೂರಾತಿ ವಿಳಂಬವಾದರೆ ಯಾವ ಕಾರಣಕ್ಕೆ ಸಮಸ್ಯೆಯಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಿ. ಸಾಧ್ಯವಾದರೆ ಬ್ಯಾಂಕ್‌ನವರು ಕೇಳುವ ದಾಖಲೆಗಳನ್ನು ಒದಗಿಸಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ, ನಿಮ್ಮ ಆದಾಯಕ್ಕೆ ಎಷ್ಟು ಸಾಲ ಸಿಗಬಹುದು ಎನ್ನುವ ಅಂದಾಜು ಪಡೆದು ಮುಂದುವರಿಯಿರಿ. ಹೀಗೆ ಮಾಡಿದಾಗ ಕ್ರೆಡಿಟ್ ಸ್ಕೋರ್‌ಗೆ ತೊಂದರೆಯಾಗುವುದಿಲ್ಲ.
ಗೃಹ ಸಾಲ ಪಡೆಯುವಾಗ ಬಡ್ಡಿ ದರ ಮಾತ್ರ ಪರಿಗಣಿಸುತ್ತಾರೆ. ಆದರೆ ಬಡ್ಡಿ ದರವಷ್ಟೇ ಮುಖ್ಯವಾಗುವುದಿಲ್ಲ. ಸಾಲ ಪಡೆಯಲು ಎಷ್ಟು ನಿರ್ವಹಣಾ ಶುಲ್ಕ ಕಟ್ಟಬೇಕು, ಅವಧಿಗೆ ಮುನ್ನ ಸಾಲ ಮರುಪಾವತಿಗೆ ಶುಲ್ಕಗಳಿವೆಯೇ, ಕಂತು ತಡವಾಗಿ ಪಾವತಿಸಿದರೆ ದಂಡ ಎಷ್ಟು… ಹೀಗೆ ಎಲ್ಲ ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಸಾಲ ಮಂಜೂರಾತಿ ಶುಲ್ಕದ ಮೇಲೂ ಗಮನವಿರಬೇಕು.
ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವ ಬ್ಯಾಂಕ್‌ನಲ್ಲಿ ಯಾವೆಲ್ಲ ರೀತಿಯ ಯೋಜನೆಗಳಿವೆ ಎನ್ನುವ ಬಗ್ಗೆ ತಿಳಿಯಿರಿ. ನಂತರದಲ್ಲಿ ಯಾವ ಬ್ಯಾಂಕ್ ಕಡಿಮೆ ಬಡ್ಡಿ ದರ ಮತ್ತು ಕಡಿಮೆ ನಿರ್ವಹಣಾ ಶುಲ್ಕ ಪಡೆಯುತ್ತದೋ ಅದನ್ನೇ ಆಯ್ಕೆ ಮಾಡಿ. ಬಡ್ಡಿ ದರ ಕಡಿಮೆಯಿದ್ದಾಗ ಅನುಕೂಲ ಎಷ್ಟಿರುತ್ತದೆ ಎಂಬುದನ್ನು ಪಟ್ಟಿಯಲ್ಲಿ ವಿವರಿಸಲಾಗಿದೆ.
ಬ್ಯಾಂಕ್ ಸಾಲ ಸಿಕ್ಕಿತು ಎನ್ನುವ ಧಾವಂತದಲ್ಲಿ ಅನೇಕರು ಪೂರ್ವಾಪರ ನೋಡದೆ ಬ್ಯಾಂಕ್ ದಾಖಲೆಗಳ ಮೇಲೆ ಸಹಿ ಹಾಕುತ್ತಾರೆ. ಆದರೆ, ಬ್ಯಾಂಕ್ ದಾಖಲೆಗಳನ್ನು ನಿಧಾನವಾಗಿ ಓದಿ ಅರ್ಥ ಮಾಡಿಕೊಂಡು ಮುಂದುವರಿಯುವುದು ಒಳ್ಳೆಯದು. ಬ್ಯಾಂಕ್ ಅರ್ಜಿಯನ್ನು ಓದುವುದರಿಂದ ನಿರ್ವಹಣಾ ಶುಲ್ಕ ಎಷ್ಟು, ಇಎಂಐ ಕಂತು ಎಷ್ಟು, ಎಷ್ಟು ಬಡ್ಡಿ ಕಟ್ಟಬೇಕು, ಎಷ್ಟು ವರ್ಷಕ್ಕೆ ಸಾಲ ನೀಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ. ಇದರಿಂದ ಸಂಭಾವ್ಯ ಗೊಂದಲ ತಪ್ಪುತ್ತದೆ.