ಬೆಂಗಳೂರು, ಫೆ. 23 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 271.46 ಕೋಟಿ ರೂ. ವೆಚ್ಚದಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡುತ್ತಿದೆ. ತುಮಕೂರು ರಸ್ತೆಯಲ್ಲಿರುವ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳನ್ನು ಬಿಡಿಎ ನಿರ್ಮಾಣ ಮಾಡುತ್ತಿದೆ. ಬಿಡಿಎ ನ ವಿಲ್ಲಾ ಯೋಜನೆ ಇದೇ ಅವರ್ಷ ಅಂದರೆ 2023ರ ಏಪ್ರಿಲ್ ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಮೂಲಕ ವಿಲ್ಲಾ ಹೊಂದಬೇಕು ಎಂಬುವವರ ಕನಸು ನನಸಾಗುವುದು ಹೆಚ್ಚು ದೂರವಿಲ್ಲ. ಬಿಡಿಎ ಮೊದಲ ವಿಲ್ಲಾ ಯೋಜನೆ ಇನ್ನೆರಡು ತಿಂಗಳಿನಲ್ಲಿ ಯಶಸ್ವಿಯಾಗಿ ಸಂಪೂರ್ಣವಾಗಲಿದೆ.
ಈ ಹಿಂದೆ ಬಿಡಿಎ ಆಲೂರಿನಲ್ಲಿ 452 ವಿಲ್ಲಾಗಳನ್ನು ನಿರ್ಮಾಣ ಮಾಡಿತ್ತು. ಈ ವಿಲ್ಲಾಗಳು ಶೇ.100ರಷ್ಟು ಸಂಪೂರ್ಣವಾಗಿ ಮಾರಾಟವಾಗಿವೆ. ಇದರ ಯಶಸ್ಸಿನಿಂದ ಬಿಡಿಎ ಪ್ರೇರಣೆಗೊಂಡು ಮತ್ತೊಂದು ಯೋಜನೆಗೆ ಕೈ ಹಾಕಿತು. ಹುಣ್ಣಿಗೆರೆಯಲ್ಲಿ ಮತ್ತೊಂದು ವಿಲ್ಲಾ ಯೋಜನೆಯನ್ನು ಕೂಡ ಈಗ ಯಶಸ್ವಿಯಾಗಿ ನಿರ್ಮಾಣ ಮಾಡುತ್ತಿದೆ. ಹುಣ್ಣಿಗೆರೆಯಲ್ಲಿ ಬಿಡಿಎ 31 ಎಕರೆ ಜಾಗದಲ್ಲಿ ವಿಲ್ಲಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಜಾಗದಲ್ಲಿ ಒಟ್ಟು 170 ವಿಲ್ಲಾಗಳು ನಾಲ್ಕು ಬಿಎಚ್‌ಕೆಯಲ್ಲಿದೆ. 35*50 ಅಡಿ ಅಳತೆಯಲ್ಲಿ ಇವನ್ನು ನಿರ್ಮಾಣ ಮಾಡಿದೆ. ಇನ್ನು 31 ವಿಲ್ಲಾಗಳನ್ನು ಮೂರು ಬಿಎಚ್‌ಕೆ ಯಲ್ಲಿದ್ದು, ಇದೂ ಕೂಡ 35*50 ಅಡಿ ಅಳತೆ ಇದೆ.
ಮೂರು ಬಿಎಚ್‌ಕೆಯ 121 ವಿಲ್ಲಾಗಳನ್ನು 30*40 ಅಡಿ ಅಳತೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇವೆಲ್ಲಾ ಅದಾಗಲೇ ಶೇ.85 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೇವಲ ಶೇ.15ರಷ್ಟು ಕಾಮಗಾರಿ ಮಾತ್ರ ಬಾಕಿಯಿದ್ದು, ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಹುಣ್ಣಿಗೆರೆ ವಿಲ್ಲಾ ಯೋಜನೆಯನ್ನು 2018ರ ಸೆ.25 ರಂದು ಪ್ರಾರಂಭಿಸಲಾಯ್ತು. ಹೊಂಬಾಳೆ ಕನ್‌ಸ್ಟ್ರಕ್ಷನ್ ಆ್ಯಂಡ್ ಎಸ್ಟೇಟ್ ಪ್ರೈ.ಲಿ. ಕಂಪನಿ ಇದರ ಕಾಮಗಾರಿಯ ಹೊಣೆಯನ್ನು ಹೊತ್ತು ಕೊಂಡಿತು. ಈ ಯೋಜನೆಯನ್ನು 2023ರ ಮೇ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ಕಂಪನಿ ಹೇಳಿತ್ತು.
ಇನ್ನು ಈ ವಿಲ್ಲಾಗಳ ಡಿಸೈನ್ ಅನ್ನು ಎಸಿಎಸ್ ಡಿಸೈನ್ ಕನ್ಸಲ್ಟೆಂಟ್ಸ್ ಕಂಪನಿ ಮಾಡಿತ್ತು. ಇನ್ನು ಈ ವಿಲ್ಲಾಗಳಲ್ಲಿ ಸಾಕಷ್ಟು ಸೌಕರ್ಯಗಳಿವೆ. ಈ ವಿಲ್ಲಾ ನಿರ್ಮಾಣವಾಗುತ್ತಿರುವ 31 ಎಕರೆ ಸುತ್ತ 2.1 ಮೀಟರ್ ಎತ್ತರದ ಕಾಂಪೌಂಡ್ ಅನ್ನು ನಿರ್ಮಾಣ ಮಾಡಲಾಗಿದೆ. ಸುತ್ತಲೂ ಮುಳ್ಳು ತಂತಿಯನ್ನು ಹಾಕಲಾಗಿದೆ. ಅದೂ ಕೂಡ 0.6 ಮೀಟರ್. ಇಲ್ಲಿ 6 ಮೀಟರ್ ಅಗಲದ ರಸ್ತೆ ಇದ್ದು, 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಾರ್ವಜನಿಕರಿಗಾಗಿ ಉದ್ಯಾನವನವಿದೆ. ಇಷ್ಟೇ ಅಲ್ಲದೇ, ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್ ಮತ್ತು ಮಕ್ಕಳ ಆಟದ ಮೈದಾನ, ಕೂಡ ಇದೆ. 600 ಕೆಎಲ್‌ಡಿಯ ಎಸ್‌ಟಿಪಿ ಘಟಕ, 1.5 ಲಕ್ಷ ಲೀಟರ್ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್, 1.5 ಲಕ್ಷ ಲೀಟರ್ ಸಾಮರ್ಥ್ಯದ ಸಂಪ್, 10 ಕೊಳವೆ ಬಾವಿಗಳು ಇವೆ.
ಸಾಮರ್ಥ್ಯಕ್ಕೆ ಅನುಗುಣವಾಗಿ ಪಂಪ್‌ಗಳು, ಪೈಪ್ ಸಂಪರ್ಕ ಇತ್ಯಾದಿಗಳನ್ನು ಅಳವಡಿಸಲಾಗುತ್ತಿದೆ. ಹತ್ತು ಕೊಳವೆ ಬಾವಿಗಳು ಮಳೆ ನೀರಿನಿಂದ ಪುನಶ್ಚೇತನಗೊಳ್ಳುವಂತೆ ಮಳೆ ನೀರು ಕೊಯ್ಲು ಮಾದರಿಯಲ್ಲಿ ಪೈಪ್‌ಲೈನ್ ಸಂಪರ್ಕವನ್ನು ಕೊಡಲು ಯೋಜಿಸಲಾಗಿದೆ. ಅಲ್ಲದೆ, ಇಲ್ಲಿನ ನಿವಾಸಿಗಳ ವಾಹನಗಳ ನಿಲುಗಡೆಗೆ ಅನುಕೂಲವಾಗುವಂತೆ ನಾನಾ ಮಾದರಿಯ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ತೆರೆದ ಪಾರ್ಕಿಂಗ್‌ಗೆಂದು 2640 ಚದರ ಮೀಟರ್ ಮತ್ತು ಬೇಸ್‌ಮೆಂಟ್ ಪಾರ್ಕಿಂಗ್ ವ್ಯವಸ್ಥೆಗೆ 5827.75 ಚದರ ಮೀಟರ್ ಪ್ರದೇಶವನ್ನು ಮೀಸಲಿಡಲಾಗಿದೆ. ಪರಿಸರ ಸ್ನೇಹಿ ವಿದ್ಯುತ್ ವಾಹನಗಳ ಚಾರ್ಜಿಂಗ್‌ಗೆ ಅನುಕೂಲವಾಗುವಂತೆ ಇವಿ ಚಾರ್ಜಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.