Revenue Facts

ವಕೀಲರಿಗೆ ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್ಸ್

ವಕೀಲರಿಗೆ ರಿಯಾಯಿತಿ ದರದಲ್ಲಿ ಬಿಡಿಎ ಫ್ಲಾಟ್ಸ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿನ ಫ್ಲ್ಯಾಟ್ ಗಳನ್ನು ಸಗಟಾಗಿ ರಿಯಾಯ್ತಿ ದರದಲ್ಲಿ ಬೆಂಗಳೂರು ವಕೀಲರ ಸಂಘದ ಸದಸ್ಯರಿಗೆ ಮಾರಾಟ ಮಾಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದ ನಿಯೋಗ ಮಂಗಳವಾರ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ಕುಮಾರ್ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸಿತು.

ಇದೇ ವೇಳೆ ಮಾತನಾಡಿದ ಎಸ್.ಆರ್.ವಿಶ್ವನಾಥ್ ಅವರು, ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿನ ಕನಿಷ್ಠ 100 ಫ್ಲ್ಯಾಟ್ ಗಳನ್ನು ಖರೀದಿ ಮಾಡಲು ಮುಂದೆ ಬಂದಿದ್ದರಿಂದ ಬಿಡಿಎಗೆ ಆರ್ಥಿಕ ಹೊರೆ ಆಗದ ರೀತಿಯಲ್ಲಿ ವಕೀಲರ ಸಂಘದ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ಫ್ಲ್ಯಾಟ್ ಗಳನ್ನು ಮಾರಾಟ ಮಾಡಲು ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ ನಿರ್ಧಾರದಂತೆ ವಕೀಲರ ಸಂಘದ ಸದಸ್ಯರು ನಿಗದಿತ ಸಮಯದೊಳಗೆ ಫ್ಲ್ಯಾಟ್ ಗಳನ್ನು ಖರೀದಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಫ್ಲ್ಯಾಟ್ ಖರೀದಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲು ಬಿಡಿಎ ಸಿಬ್ಬಂದಿಯನ್ನು ವಕೀಲರ ಸಂಘದ ಕಚೇರಿಯಲ್ಲಿ ನಿಯೋಜಿಸಲಾಗುತ್ತದೆ. ಅವರು ಫ್ಲ್ಯಾಟ್ ಆಯ್ಕೆ ಮತ್ತು ಇತರೆ ಮಾಹಿತಿಗಳನ್ನು ಸಂಘದ ಸದಸ್ಯರಿಗೆ ನೀಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಡಿಎ ಆಯುಕ್ತ ಕುಮಾರ್ ನಾಯಕ್ ಅವರು, ಬಿಡಿಎ ಫ್ಲ್ಯಾಟ್ ಗಳನ್ನು ಖರೀದಿಸಲು ಮುಂದೆ ಬಂದಿರುವುದು ಸಂತಸ ತಂದಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಮಾತನಾಡಿ, ರಿಯಾಯ್ತಿ ದರದಲ್ಲಿ ಫ್ಲ್ಯಾಟ್ ನೀಡುವಂತೆ ನಮ್ಮ ಸಂಘ ಮಾಡಿಕೊಂಡಿದ್ದ ಮನವಿಯನ್ನು ಪುರಸ್ಕರಿಸಿರುವ ವಿಶ್ವನಾಥ್ ಮತ್ತು ಬಿಡಿಎ ಆಯುಕ್ತ ಕುಮಾರ್ ನಾಯಕ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಅಲ್ಲದೇ, ಬಿಡಿಎ ಉಸ್ತುವಾರಿಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದರು.

ಆದಷ್ಟೂ ಶೀಘ್ರದಲ್ಲಿ ಫ್ಲ್ಯಾಟ್ ಖರೀದಿಸುವ ಪ್ರಕ್ರಿಯೆಯನ್ನು ಸಂಘದ ವತಿಯಿಂದ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಡಿಎ ಕಾರ್ಯದರ್ಶಿ ಶಾಂತರಾಜು, ಅಭಿಯಂತರ ಸದಸ್ಯ ಶಾಂತರಾಜಣ್ಣ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಇದ್ದರು.

Exit mobile version