Revenue Facts

ಬಿಡಿಎ ನಿರ್ಮಾಣದ ಆಲೂರು ವಿಲ್ಲಾಗಳಲ್ಲಿ ಕಳಪೆ ಕಾಮಗಾರಿ : ಮಾಲೀಕರಿಗೆ ತಲೆನೋವು

ಬೆಂಗಳೂರು, ಮಾ. 16 : ಆಲೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿದ ವಿಲ್ಲಾ ಫ್ಲ್ಯಾಟ್ಸ್ಗಳಲ್ಲಿ ಹೊಸ ಸಮಸ್ಯೆ ಎದುರಾಗಿದೆ. ಈ ವಿಲ್ಲಾಗಳಲ್ಲಿ ವಾಸಿಸುತ್ತಿರುವ ಜನರು ಕಂಗಾಲಾಗಿದ್ದಾರೆ. ವಿಲ್ಲಾಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಗೋಡೆಗಳು ಬಿರುಕು ಬೀಳುತ್ತಿವೆ ಎಂದು ಆತಂಕಗೊಂಡಿದ್ದಾರೆ. ಈಗಾಗಲೇ ಕಳೆದ ನಾಲ್ಕು ವರ್ಷದಿಂದ ಇದೇ ಗೋಳಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಮನೆ ಮಾಲೀಕರು ಗೋಳಾಡುತ್ತಿದ್ದಾರೆ.

ನೀರು ಸೋರಿಕೆ ಹಾಗೂ ರುಕು ಬಿಟ್ಟ ಗೋಡೆಗಳನ್ನು ಕಳೆದ ನಾಲ್ಕು ವರ್ಷದಿಂದ ಸುಮಾರು 18 ರಿಂದ 80 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಹಾಗಿದ್ದರೂ ಕೂಡ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ. ಈ ಸಮಸ್ಯೆಗಳು ಪದೇ ಪದೇ ಮರುಕಳಿಸುತ್ತಿದ್ದು, ಇದರಿಂದ ಬೇಸತ್ತಿದ್ದೇವೆ ಎಂದು ಮನೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಆಲೂರು ಬಿಡಿಎ ಹಂತ-2 ಮಾಲೀಕರ ಕ್ಷೇಮಾಭಿವೃದ್ಧಿ ಸಂಘದರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಸಂಘದ ಕಾರ್ಯದರ್ಶಿಗಳಾದ ಶಶಿಧರ ಗಿರಡ್ಡಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಈ ಸಮಸ್ಯೆ ಬಗ್ಗೆ ಈಗಾಗಲೇ ನಾವು ಪರಿಹರಿಸುವಂತೆ ಬಿಡಿಎ ಅಧ್ಯಕ್ಷ ಎಸ್ಆರ್ ವಿಶ್ವನಾಥ್ ಅವರಿಗೆ ಮನವಿ ಮಾಡಲಾಗಿದೆ. ಸಮಸ್ಯೆ ಬಗೆಹರಿಸುವುದಾಗಿ ಅವರು ಕೂಡ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ, ಇಲ್ಲಿರುವ 400 ವಿಲ್ಲಾಗಳಿಗೆ ವಾಟರ್ ಪ್ರೂಫ್ ಹೊದಿಕೆಗೆ ಮುಂದಾಗಿದ್ದರು. ಇದಕ್ಕಾಗಿ ಇಂಜಿನಿಯರ್ಗಳಿಗೆ ನಿರ್ದೇಶನಗಳನ್ನು ನೀಡಿದ್ದರು. ಆದರೆ, ಯಾವ ಇಂಜಿನಿಯರ್ ಗಳು ಕೂಡ ಈ ಕೆಲಸದ ಬಗ್ಗೆ ಆಸಕ್ತಿಯನ್ನು ತೋರಿಸುತ್ತಿಲ್ಲ.

ಇನ್ನು ಇಲ್ಲಿರುವ ಎಲ್ಲಾ ವಿಲ್ಲಾಗಳಿಗೂ ವಾಟರ್‌ ಪ್ರೂಫ್‌ ಹೊದಿಕೆ ನೀಡಲು ಕಡಿಮೆ ಎಂದರೂ 2 ಕೋಟಿ ರೂ. ಕರ್ಚಾಗಬಹುದು. ಇದು ದುಬಾರಿ ಎಂದು ಹಿಂಜರಿಯುತ್ತಿರಬಹುದು ಎಂದು ಹೇಳಿದ್ದಾರೆ. ಬಿಡಿಎ ಗುತ್ತಿಗೆದಾರರಾದ ಗೌರಿ ಕನ್ಸ್ಟ್ರಕ್ಷನ್ಸ್ ಕಳಪೆ ನಿರ್ಮಾಣ ಮಾಡಿದ್ದಾರೆ. ದುರಸ್ತಿ ಕಾರ್ಯಕ್ಕೆ ಬಿಡಿಎ ನಮಗೆ ಅನುದಾನವನ್ನು ನೀಡಬೇಕಿದೆ. ಡ್ಯೂಪ್ಲೆಕ್ಸ್ ಫ್ಲಾಟ್ಗಳಲ್ಲಿ ಬೆಡ್ ರೂಮ್ ಗಳಿಗೆಲ್ಲಾ ನೀರು ಹರಿಯುತ್ತಿದೆ. ಇದರಿಂದ ಬಹಳ ಸಮಸ್ಯೆ ಆಗುತ್ತಿದೆ. ಇದು ಹೀಗೆ ಮುಂದುವರೆದರೆ, ಇನ್ನಷ್ಟು ಸಮಸ್ಯೆ ಎದುರಾಗುತ್ತದೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

ಬ್ಲಾಕ್ 5ರಲ್ಲಿ 3ಬಿಎಚ್ ಕೆ ಮನೆ ಹೊಂದಿರುವ ಶಂಬುಲಿಂಗ ಆಚಾರ್ಯ ಎಂಬುವವರು ಮಾತನಾಡಿ, ರೂಮ್ ನಲ್ಲಿ 24*7 ನೀರು ಸೋರಿಕೆಯಾಗುತ್ತಿತ್ತು. ಸೋರಿಕೆ ಸರಿಪಡಿಸಲು ಮೂರು ದಿನಗಳ ಹಿಂದೆ 25 ಸಾವಿರ ರೂ ಖರ್ಜು ಮಾಡಿದ್ದೆ. ಈ ಮೊದಲೂ ಕೂಡ ರೂ.2000 ಮತ್ತು ರೂ.10,000 ಖರ್ಚು ಮಾಡಿದ್ದೇನೆ. ಫ್ಲ್ಯಾಟ್’ ಕೇವಲ ನಾಲ್ಕು ವರ್ಷಗಳಷ್ಟು ಹಳೆಯದಷ್ಟೇ ಈಗಲೇ ಸಮಸ್ಯೆಗಳು ತಲೆದೋರಿದೆ. ಇನ್ನು 2019ರಲ್ಲಿ ಫ್ಲ್ಯಾಟ್ ಖರೀದಿ ಮಾಡಲಾಗಿದೆ. ಮಾಸ್ಟರ್ ಬೆಡ್ ರೂಮ್ ನಲ್ಲಿ ನೀರು ಸೋರುತ್ತಿದೆ, ಗೋಡೆಗಳೆಲ್ಲವೂ ಬಿರುಕು ಬಿಟ್ಟಿವೆ. ಈ ಹಿಂದೆಯೇ ಇದರ ದುರಸ್ತಿ ಮಾಡಿಸಲಾಗಿದೆ. ಹಾಗಿದ್ದರೂ, ಈಗ ಮತ್ತೆ ಸಮಸ್ಯೆ ಎದುರಾಗಿದೆ.

Exit mobile version