Revenue Facts

ಆದಾಯ ಹೆಚ್ಚಳಕ್ಕೆ ಬಿಬಿಎಂಪಿ ಕ್ರಮ;ತುಷಾರ್ ಗಿರಿನಾಥ್

ಬೆಂಗಳೂರು: ಬಿಬಿಎಂಪಿ(BBMP) ತನ್ನ ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಆಸ್ತಿ -ತೆರಿಗೆ ವ್ಯಾಪ್ತಿಗೆ ಒಳಪಡದ ಆಸ್ತಿಗಳನ್ನು ಪತ್ತೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಅಂದಾಜಿನ ಪ್ರಕಾರ 7-8 ಲಕ್ಷ ಖಾತೆ ಇಲ್ಲವಾಗಿದ್ದು, ಅವುಗಳು ಇನ್ನೂ ತೆರಿಗೆಗೆ ಒಳಪಟ್ಟಿಲ್ಲ. ಹೀಗಾಗಿ ಅಂತಹ ಆಸ್ತಿಗಳನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಆಸ್ತಿಗಳಿಗೆ ಮೊದಲ ಹಂತದಲ್ಲಿ ಬಿ ಖಾತಾ ನೀಡಲಾಗುವುದು. ನಂತರ ತೆರಿಗೆ ಸಂಗ್ರಹಿಸಲಾಗುವುದು ಎಂದರು. ಬೆಂಗಳೂರಿನಲ್ಲಿ 19 ಲಕ್ಷ ಆಸ್ತಿಗಳಿದ್ದು, ಸುಮಾರು 15-16 ಲಕ್ಷ ಆಸ್ತಿಗಳಿಂದ ಮಾತ್ರ ತೆರಿಗೆ ಸಂಗ್ರಹಿಸಲಾಗುತ್ತಿದೆ. ಆಸ್ತಿ ತೆರಿಗೆ ಸಂಗ್ರಹಿಸಲು ವಾರದ ಗುರಿಯನ್ನು ಹೊಂದುವಂತೆ ಎಲ್ಲಾ 64 ಉಪವಿಭಾಗಗಳಲ್ಲಿನ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಾಲಿಕೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 4,690 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನೂ ಹೊಂದಿದ್ದು, ಈಗಾಗಲೇ ಬಿಬಿಎಂಪಿ ತೆರಿಗೆ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ ತೆರಿಗೆ ಸಂಗ್ರಹಿಸಲು ಕಂದಾಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

Exit mobile version