ಬೆಂಗಳೂರು, ಮೇ. 17 : ಬಿಬಿಎಂಪಿಯಲ್ಲಿ ಪುನಃ ಅಕ್ರಮವಾಗಿ ಎ ಖಾತಾ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಸಾವಿರಾರು ಬಿ ಖಾತಾಗಳನ್ನು ಅಕ್ರಮವಾಗಿ ಎ ಖಾತಾಗೆ ವರ್ಗಾಯಿಸಿರುವ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೋಟೀಸ್ ಜಾರಿ ಮಾಡಿದ್ದಾರೆ. ಎ ಖಾತಾ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಆಯುಕ್ತರು, ತನಿಖೆಯನ್ನು ನಡೆಸಲು ಮುಂದಾಗಿದ್ದಾರೆ.
ಈ ಹಿಂದೆ ಬಿಬಿಎಂಪಿಯ 243 ವಾರ್ಡ್ ಗಳಲ್ಲಿ ಅಂದಾಜು ಒಂದು ಲಕ್ಷ ಎ ಖಾತಾಗಳು ಅಕ್ರಮವಾಗಿ ನೋಂದಣಿಯಾಗಿದ್ದವು. ಈ ಬಗ್ಗೆ ಪರಿಶೀಲನಾ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ನಗರದಲ್ಲಿ ಅಕ್ರಮವಾಗಿ ಎ ಖಾತೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಸಂಬಂಧ ಪರಿಶೀಲನೆಗೆ ಬಿಬಿಎಂಪಿ ಮುಂದಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಎಲ್ಲಾ ಖಾತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಿದ್ದರು.
ಆದರೆ, ಇದರ ನಡುವೆಯೇ ವಿಧಾನಸಭೆ ಚುನಾವಣೆ ಬಂದ ಹಿನ್ನೆಲೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಲೆಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದರು. ಇದೇ ಸಂದರ್ಭದಲ್ಲಿ ಈಗ ಪುನಃ ಎ ಖಾತಾ ಅಕ್ರಮ ನಡೆದಿದೆ. ಈ ಸಂಬಂಧ ತನಿಖೆಯನ್ನು ಪ್ರಾರಂಭಿಸಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಆರ್ ಆರ್ ನಗರ, ದಾಸರಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ವಲಯಗಳಲ್ಲಿ ಅಕ್ರಮ ಎ ಖಾತೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಬೊಮ್ಮನಹಳ್ಳಿ ವಲಯದಲ್ಲಿ ಬರೋಬರಿ 600ಕ್ಕೂ ಹೆಚ್ಚಿನ ಬಿ ಖಾತ ಆಸ್ತಿಗಳನ್ನು ಎ ಖಾತೆಗೆ ವರ್ಗವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಎ ಖಾತಾ ಮಾಡಿಸಲು ಯಾವುದೇ ಶುಲ್ಕವನ್ನು ಪಡೆದಿಲ್ಲ. ಹೀಗಾಗಿ ಜಯರಾಮ್ ನೇತೃತ್ವದ ಸಮಿತಿಯನ್ನು ರಚಿಸಿದ್ದು, ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಅಕ್ರಮವಾಗಿ ಆಗಿರು ಎ ಖಾತಾಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಜಯರಾಮ್ ಅವರಿಗೆ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ. ತಪ್ಪು ಮಾಡಿರುವ ಅಧಿಕಾರಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರ ನೀಡಿದ್ದಾರೆ.