ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ (ಬೈಯಪ್ಪನಹಳ್ಳಿ- ಕೃಷ್ಣರಾಜಪುರ, ಕೆಂಗೇರಿ ಚಲ್ಲಘಟ್ಟ) ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ(Narendrmodi) ಅವರು ಮಧ್ಯಾಹ್ನ 12.15ಕ್ಕೆ ವರ್ಚುವಲ್(Virtual) ಮೂಲಕ ಚಾಲನೆ ನೀಡಲಿದ್ದಾರೆ.ವಿಸ್ತೃತ ಮಾರ್ಗ ಪೂರ್ಣವಾಗಿ ಸಜ್ಜಾಗಿದ್ದರೂ, ಪ್ರಧಾನಿಗಳಿಂದ ಅಧಿಕೃತ ಉದ್ಘಾಟನೆಯಾಗಲೆಂದು ಬಿಎಂಆರ್‌ಸಿಎಲ್(BMRCL) ಕಾಯುತ್ತಿತ್ತು. ಇದರಿಂದ ಉಂಟಾದ ವಿಳಂಬದಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದರು. ವಿಸ್ತೃತ ಮಾರ್ಗ ಕಾರ್ಯಾರಂಭ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಯಾಣಿಕರ ಆಕ್ರೋಶದ ಬೆನ್ನಲ್ಲೇ ಅ.9ರಂದು ವಿಸ್ತೃತ ಮಾರ್ಗದಲ್ಲಿ ಸಂಚಾರ ಆರಂಭವಾಗಿದೆ.ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿತಗೊಂಡಿದ್ದು, ಪ್ರಯಾಣಿಕರ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹೋತ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ನೇರಳೆ ಮಾರ್ಗ ಆರಂಭದಿಂದ ಪ್ರಯಾಣದ ಸಮಯ ಶೇ.40ರಷ್ಟು ಉಳಿತಾಯವಾಗಲಿದ್ದು ಒಟ್ಟಾರೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಐಟಿ ಹಬ್, ಆಸ್ಪತ್ರೆಯ ಪ್ರಮುಖ ವ್ಯಾಪಾರ ಕೇಂದ್ರಗಳಿಗೆ ಸೇವೆ ಒದಗಿಸುವ ಮೂಲಕ ವಾಹನ ದಟ್ಟಣೆಯನ್ನು ಮತ್ತು ವಾತಾವರಣದಲ್ಲಿನ ಇಂಗಾಲ ಪ್ರಮಾಣ ಕಡಿಮೆಗೊಳಿಸಲಿದೆ.ಬೆಂಗಳೂರಿನ ಜನಸಂಖ್ಯೆಯ ಶೇ.20ಕ್ಕಿಂತ ಅಧಿಕ ನಾಗರಿಕರಿಗೆ ಸೇವೆ ಲಭ್ಯವಾಗುವ ನಿರೀಕ್ಷೆ ಇದ್ದು ಒಟ್ಟಾರೆ ಈ ಮಾರ್ಗದ ಕಾರ್ಯಾಚರಣೆ ಉದ್ದವು 74 ಕಿ.ಮೀಗೆ ವಿಸ್ತರಿಸಲಿದೆ. ಈ ವಿಸ್ತರಿತ ಮಾರ್ಗ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ 43.5 ಕಿ.ಮೀ ಇದ್ದು, ಒಟ್ಟು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ. ಈ ಮಾರ್ಗ ಒಟ್ಟು 37 ನಿಲ್ದಾಣಗಳನ್ನು ಒಳಗೊಂಡಿದ್ದು, ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ 60 ರೂ. ಟಿಕೆಟ್ ದರ ನಿಗದಿಯಾಗಿದೆ. ಇದೀಗ ನಮ್ಮ ಮೆಟ್ರೋ ಜಾಲ ಒಟ್ಟು 73.81 ಕಿ.ಮೀ.ಗೆ ವಿಸ್ತರಣೆಯಾಗಿದೆ.