ಇಳಿ ವಯಸ್ಸಿನ ಜೀವಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಹಿರಿಯರ ವಾಸಕೇಂದ್ರಗಳು ಪರಿಹಾರವಾಗಿ ಕಾಣಿಸುತ್ತಿವೆ. ಕೊರೊನಾ ವೈರಸ್‌ಗೆ ತುತ್ತಾಗುವವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿರಿಯ ನಾಗರಿಕರೇ ಆಗಿದ್ದಾರೆ. ಆದ್ದರಿಂದ ಸಾಂಕ್ರಾಮಿಕೋತ್ತರ ಸಂದರ್ಭದಲ್ಲಿ ಈ ʻಹಿರಿಯರ ಮನೆಗಳುʼ ನಿಜಕ್ಕೂ ಆಸರೆಯಾಗಿ ಒದಗಿಬಂದಿವೆ.
ಹಿರಿಯ ನಾಗರಿಕರು ಸಾಮಾನ್ಯವಾಗಿ ಸ್ವತಂತ್ರವಾಗಿ ಅಥವಾ ವಸತಿ ಸಮುಚ್ಚಯಗಳಲ್ಲಿ ವಾಸಿಸುತ್ತಾರೆ. ಸಾಂಕ್ರಾಮಿಕದ ಸಂದರ್ಭದಲ್ಲಿ ನಿವಾಸಿಗಳ ಕಲ್ಯಾಣ ಸಂಘವು ರೂಪಿಸಿದ್ದ ಅನೇಕ ನಿಯಂತ್ರಣ ನಿಯಮಗಳು ಹಿರಿಯರಿಗೆ ಕಿರಿಕಿರಿಯಾಗಿ ಪರಿಣಮಿಸಿತ್ತು. ಇದಕ್ಕೆ ಬದಲಾಗಿ, ಹಿರಿಯರ ವಾಸ ಕೇಂದ್ರಗಳಲ್ಲಿ ಏಕರೂಪದ ಅಗತ್ಯಗಳನ್ನು ಕಾಣಬಹುದಾಗಿತ್ತು ಮತ್ತು ಇಡೀ ಸಮುದಾಯಕ್ಕೆ ಒಳಿತಾಗುವಂತಹ ನಿರ್ಣಯಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದ್ದರಿಂದ ಆ ವಾತಾವರಣದಲ್ಲಿ ಹಿರಿಯರ ಜೀವನಮಟ್ಟ ಉತ್ತಮವಾಗಿತ್ತು ಮತ್ತು ಬಹುತೇಕ ಸಹಜವಾಗಿತ್ತು.
ಮನೆಯ ವೈಶಿಷ್ಟ್ಯಗಳು:
ಹಿರಿಯರ ವಸತಿ ಗೃಹಗಳು 55 ವರ್ಷ ಮೇಲ್ಪಟ್ಟವರ ಅಗತ್ಯಗಳನ್ನು ಪೂರೈಸುವಂತೆ ರೂಪುಗೊಂಡಿರುತ್ತವೆ. ಸ್ವತಂತ್ರವಾಗಿ, ಅನುಕೂಲಕರ ವಾತಾವರಣ, ವಸಯ್ಕ ಸ್ನೇಹಿ ಸೌಲಭ್ಯಗಳು ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಅನುಕೂಲ ಆಗುವಂತಿರುತ್ತವೆ. ಇದಲ್ಲದೆ ಹಿರಿಯರಿಗೆ ತಕ್ಕಂತೆ ಆಹಾರ, ದೈಹಿಕ ಚಟುವಟಿಕೆಗಳಿಗೆ ಮತ್ತು ವಿರಾಮಕ್ಕೆ ಅವಕಾಶವಿರುತ್ತದೆ. ಕಟ್ಟಡಗಳು ಕಡಿಮೆ ಎತ್ತರವಾಗಿರುತ್ತವೆ, ಅಗಲವಾದ ಬಾಗಿಲುಗಳು, ವಿಶಾಲ ಸ್ನಾನಗೃಹ, ಜಾರದ ನೆಲಹಾಸು, ಕೈ ಬೇಲಿಗಳು, ಗಾಲಿಕುರ್ಚಿಗಳ ಓಡಾಟಕ್ಕೆ ಅನುವಾಗುವ ಇಳಿಜಾರುಗಳು ಇರುತ್ತವೆ.
ಸವಾಲುಗಳಿಗೆ ಕೊನೆಯಿಲ್ಲ:
ಹವಾಮಾನ, ಸುಸಜ್ಜಿತ ಸಂಪರ್ಕ ವ್ಯವಸ್ಥೆ, ಸುವ್ಯವಸ್ಥಿತ ಸಾಮಾಜಿಕ ಸೌಕರ್ಯಗಳ ಕಾರಣದಿಂದಾಗಿ ಬೆಂಗಳೂರು ಪಿಂಚಣಿದಾರರ ಸ್ವರ್ಗ ಎಂಬಂತಾಗಿದೆ. ಆದಾಗ್ಯೂ ಹಿರಿಯರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರಮುಖ ಡೆವಲಪರ್‌ಗಳ ಸಕ್ರಿಯ ಸಹಭಾಗಿತ್ವ ಇನ್ನಷ್ಟು ಅಗತ್ಯವಾಗಿದೆ. ಹೆಚ್ಚಿನ ಡೆವಲಪರ್ಗಳಲ್ಲಿ ಈ ಅಗತ್ಯಗಳಿಗೆ ಸ್ಪಂದಿಸುವ ಪರಿಣತಿ, ಜ್ಞಾನ, ಸಂಪನ್ಮೂಲ ಲಭ್ಯವಿಲ್ಲದ ಕಾರಣ ದೀರ್ಘಾವಧಿ ಅಗತ್ಯಗಳ ಪೂರೈಸುವಲ್ಲಿ ಸಫಲರಾಗುತ್ತಿಲ್ಲ.
ಬಹುತೇಕ ʻಹಿರಿಯರ ಮನೆಗಳುʼ ಬೆಂಗಳೂರಿನ ಹೊರವಲಯದಲ್ಲಿ ರೂಪುಗೊಂಡಿವೆ. ಕನಕಪುರ ರಸ್ತೆ, ಸರ್ಜಾಪುರ ರಸ್ತೆ, ಆನೆಕಲ್‌ನಂತಹ ಪ್ರದೇಶಗಳಲ್ಲಿ ಇಂತಹ ಮನೆಗಳು ಹೆಚ್ಚಾಗಿ ನಿರ್ಮಾಣವಾಗಿವೆ. ಅದರಲ್ಲೂ ದಕ್ಷಿಣ ಬೆಂಗಳೂರಿನಲ್ಲಿ ಹೆಚ್ಚಿನ ಹಿರಿಯರ ವಾಸಕೇಂದ್ರಗಳಿವೆ. ಅದೇ ರೀತಿ ಉತ್ತರ ಬೆಂಗಳೂರಿನ ದೇವನಹಳ್ಳಿ, ಜಾಲಹಳ್ಳಿ, ಚಿಕ್ಕಬಳ್ಳಾಪುರದಲ್ಲಿ ಸಾಕಷ್ಟು ಯೋಜನೆಗಳು ಪ್ರಗತಿಯಲ್ಲಿವೆ.
ʻಹಿರಿಯರ ಮನೆʼಗಳ ಕೆಲವು ಅನುಕೂಲಗಳು
• ತಮ್ಮಿಷ್ಟದಂತೆ ಜೀವಿಸುವ ಸ್ವಾತಂತ್ರ್ಯ
• ಸಮಯಕ್ಕೆ ಸರಿಯಾಗಿ ಸ್ವಚ್ಛತೆ, ನಿರ್ವಹಣೆ
• ದೈನಂದಿನ ಕಾರ್ಯಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ
• ತಮಗೆಂದೇ ಮೀಸಲಾದ ಮತ್ತು ತರಬೇತಿ ಹೊಂದಿದ ತಂಡ ಸೇವೆಗೆ ಲಭ್ಯ
• ಬಟ್ಟೆ ತೊಳೆದುಕೊಳ್ಳುವ ಗೊಡವೆಯಿಲ್ಲ
• ಮೂಲಸೌಕರ್ಯಗಳ ಸಮರ್ಥ ನಿರ್ವಹಣೆ
• ಅನಾಹುತಕ್ಕೆ ಅನುವು ಮಾಡಿಕೊಡದಂತೆ ವಿದ್ಯುತ್ ಮತ್ತು ಕೊಳಾಯಿ ನಿರ್ವಹಣೆ
• ಉತ್ತಮ ನಿರ್ವಹಣೆಯ ಸಮುದಾಯ ಉದ್ಯಾನ, ಈಜುಕೊಳ
• ರುಚಿಕರ, ಪೌಷ್ಟಿಕ ಊಟ, ಪಾನೀಯಗಳ ಪೂರೈಕೆ
• ವೈ-ಪೈ ಸಹಿತ ಕ್ಲಬ್‌ಹೌಸ್
• ಕಂಪ್ಯೂಟರ್ ಮತ್ತು ಅಂತರ್ಜಾಲ ಸಂಪರ್ಕವಿರುವ ಗ್ರಂಥಾಲಯ
• ಆವರಣದ ಒಳಗಡೆ ಓಡಾಡಲು ಬ್ಯಾಟರಿ ಚಾಲಿತ ವಾಹನಗಳು
• ತರಬೇತಿ ಪಡೆದ ವೈದ್ಯಕೀಯ ಮತ್ತು ಅರೆವೈದ್ಯಕೀಯ ತಜ್ಞರು
• ನಿರಾತಂಕವಾಗಿ ಬದುಕಲು 24/7 ಭದ್ರತೆ
• ಸಿಸಿಟಿವಿ ಕ್ಯಾಮೆರಾ ಕಣ್ಗಾವಲು
• ಹೊರಗಿನವರ ಪ್ರವೇಶದ ಮೇಲೆ ನಿಯಂತ್ರಣ