Revenue Facts

ಆಗಸ್ಟ್ 1 ರಿಂದ ಎಕ್ಸ್ಪ್ರೆಸ್ವೇಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ನಿಷೇಧ – ಅಲೋಕ್ ಕುಮಾರ್.

ಬೆಂಗಳೂರು ಜು.25 : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‌ವೇನಲ್ಲಿ ಅಪಘಾತ ತಡೆಯಲು ಪೊಲೀಸ್ ಇಲಾಖೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್‌ಕುಮಾರ್ ಮಂಗಳವಾರ (ಜೂನ್ 25) 2ನೇ ಬಾರಿಗೆ ಹೆದ್ದಾರಿ ಪರಿಶೀಲನೆ ನಡೆಸಿದರು.

ಕಳೆದ ತಿಂಗಳು, ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಹೆದ್ದಾರಿ ಪರಿಶೀಲನೆ ಮತ್ತು ಹಲವು ನ್ಯೂನತೆಗಳನ್ನು ಸರಿಪಡಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೆದ್ದಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾತನಾಡಿದ ಅಲೋಕ್ ಕುಮಾರ್ ರವರು , ಆಗಸ್ಟ್ 1ರಿಂದ ಎಕ್ಸ್ ಪ್ರೆಸ್ ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸಂಚಾರ ನಿಷೇಧಿಸಲಾಗುವುದು.ಈ ಸಂಬಂಧ ಜೂ.12ರಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಆಗಸ್ಟ್ 1ರಿಂದ ಹೊಸ ನಿಯಮ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಇನ್ನೂ ಹಲವು ಲೋಪಗಳಿವೆ, ಅಪಘಾತ ತಡೆಯಲು ಪೊಲೀಸ್ ಇಲಾಖೆ ಸಾಕಷ್ಟು ಕೆಲಸ ಮಾಡಿದೆ. ಹಾಗಾಗಿ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಈ ಮಧ್ಯೆ ಹೆದ್ದಾರಿ ಪ್ರಾಧಿಕಾರವು ಸ್ಕೈವಾಕ್‌ನ ಪ್ರವೇಶ, ನಿರ್ಗಮನ ಮತ್ತು ನಿರ್ಮಾಣವನ್ನು ಸರಿಪಡಿಸಬೇಕು. ಸರಕಾರಕ್ಕೆ ವರದಿ ಸಲ್ಲಿಸುವ ಸೌಲಭ್ಯ ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ಟೆಂಡರ್ ಆಗುವುದರಿಂದ ಹೊಸ ಉಪಕರಣಗಳು ಬರುವುದು ತಡವಾಗುತ್ತದೆ. ಹೆದ್ದಾರಿ ಪ್ರಾಧಿಕಾರಕ್ಕೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸುಮ್ಮನೆ ಆಟವಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ತಿಂಗಳ ಜುಲೈ 12ರಂದು ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯಿದೆ 2002ರ ಅಡಿಯಲ್ಲಿ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತ ತಡೆಯಲು ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ಕೆಲ ವಾಹನಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಗಂಟೆಗೆ 80 ರಿಂದ 100 ಕಿ.ಮೀ ಮಿತಿಯನ್ನು ವಿಧಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಯಾವ ವಾಹನಗಳನ್ನು ನಿರ್ಬಂಧಿಸಲಾಗಿದೆ ?
– ಮೋಟಾರ್ ಸೈಕಲ್‌ಗಳು (ಸ್ಕೂಟರ್‌ಗಳು ಮತ್ತು ಇತರ ದ್ವಿಚಕ್ರ ವಾಹನಗಳು)
– ತ್ರಿಚಕ್ರ ವಾಹನ (ಆಟೋ ರಿಕ್ಷಾಗಳು, ಇ-ಕಾರ್ಟ್‌ ವಾಹನಗಳು)
– ಮೋಟಾರು ರಹಿತ ವಾಹನಗಳು, ಸೈಕಲ್‌ಗಳು
– ಟ್ರಾಕ್ಟರ್‌ಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೇಲರ್ ವಾಹನಗಳು

Exit mobile version