ಬೆಂಗಳೂರು;ಅತ್ತಿಬೆಲೆ ಪಟಾಕಿ ಗೋದಾಮು ದುರಂತದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ಇಂದು ಅಧಿಕಾರಿಗಳ ಜೊತೆ ಸಿಎಂ ಮಹತ್ವ ಸಭೆ ನಡೆಸಲಿದ್ದಾರೆ. ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸಿಎಂ ಸಿದ್ದರಾಮಯ್ಯ ಗೃಹಕಚೇರಿ ಕೃಷ್ಣಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಿಗದಿಯಾಗಿದೆ. ಅಗತ್ಯ ಮಾಹಿತಿಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದ್ದು, ಪಟಾಕಿ ದುರಂತದ ಬಗ್ಗೆಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.ಶನಿವಾರ ಅತ್ತಿಬೆಲೆಯಲ್ಲಿ ಘೋರವೇ ನಡೆದಿತ್ತು. ಸಂಜೆ 3.30 ಸಮಯದಲ್ಲಿ ನೋಡ ನೋಡುತ್ತಿದ್ದಂತೆಯೇ ಪಟಾಕಿ ಗೋಡೌನ್ ಬೆಂಕಿ ಜ್ವಾಲೆಯಲ್ಲಿ ಧಗಧಗಿಸಿತ್ತು. ಒಟ್ಟು 14 ಕಾರ್ಮಿಕರು ಮೃತಪಟ್ಟಿರೋ ಇದೇ ಪ್ರಕರಣವನ್ನ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.ಇನ್ನೂ ಸಿಐಡಿ ಐಜಿಪಿ ಮಧುಕರ್ ಪವಾರ್ ನೇತೃತ್ವದ ತಂಡ ನಿನ್ನೆ(ಅ.09) ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ಮತ್ತೊಂದೆಡೆ ಐದಾರು ಜೆಸಿಬಿಗಳನ್ನ ಬಳಸಿಕೊಂಡು ಗೋದಾಮನ್ನ ನೆಲಸಮಗೊಳಿಸಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಆಯ್ತಾ ಅನ್ನೋ ಬಗ್ಗೆಯೂ ತನಿಖೆಯಾಗುತ್ತಿದ್ದು, ಈ ಬಗ್ಗೆ ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳ ತಂಡ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದೆ.