Revenue Facts

ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಶೀಘ್ರವೇ ಲಭ್ಯ!!

ಬೆಂಗಳೂರು, ಜು. 13 : ರಾಜ್ಯ ಸರ್ಕಾರದ ನೌಕರರಿಗೆ ಮತ್ತು ನೌಕರರ ಕುಟುಂಬಕ್ಕೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಸಿಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಲಾಭವನ್ನು ಸದ್ಯದಲ್ಲೇ ಪಡೆಯಲು ಲಭ್ಯವಿರುತ್ತದೆ. ಇದರ ಲಾಭ ಪಡೆಯಲು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ ವೆಬ್ಸೈಟ್ ಗೆ ತೆರಳಿ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕು ಎಂದು ಎಲ್ಲ ಸರ್ಕಾರಿ ನೌಕರರಿಗೆ ಸರ್ಕಾರ ಸೂಚನೆ ನೀಡಲಾಗಿದೆ.

ನೌಕರರು ತಮ್ಮ ಹಾಗೂ ತಮ್ಮ ಕುಟುಂಬದ ಮಾಹಿತಿಯನ್ನು HRMS ನಲ್ಲಿ ಅಪಡೇಟ್ ಮಾಡಬೇಕು. ಜೊತೆಗೆ ಈ ಬಗ್ಗೆ ಕಚೇರಿಗೆ ಸಹ ಮಾಹಿತಿಯನ್ನು ಒದಗಿಸಬೇಕು. ಕಳೆದ ಮಾರ್ಚ್ನಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಸಾಫ್ಟ್ವೇರ್ ಸಮಸ್ಯೆ ಇದ್ದಿದ್ದರಿಂದ ಯೋಜನೆಯ ಜಾರಿ ಸಾಧ್ಯವಾಗಲಿಲ್ಲ. ಸದ್ಯ ಈ ಸಮಸ್ಯೆಯನ್ನು ಸರಿಪಡಿಸಲಾಗುತ್ತಿದ್ದು, ಆದಷ್ಟು ಬೇಗ ಇದರ ಲಾಭ ಪಡೆಯಬಹುದಾಗಿದೆ.

ನೌಕರರ ಮಾಹಿತಿ ಸಂಗ್ರಹ ಸಂಪೂರ್ಣವಾಗುತ್ತಿದ್ದಂತೆಯೇ ಕಾರ್ಡ್ ರೂಪಿಸುವ ಪ್ರಕ್ರಿಯೆ ಆರಂಭವಾಗಲಿದೆ. 2020-21 ನೇ ಸಾಲಿನ ರಾಜ್ಯ ಬಜೆಟ್ನಲ್ಲಿಯೇ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ರಾಜ್ಯ ಉಚ್ಚ ನ್ಯಾಯಾಲಯದ ನೌಕರರು, ರಾಜ್ಯ ವಿಧಾನ ಮಂಡಲದ ನೌಕರರು, ಆರೋಗ್ಯ ಭಾಗ್ಯ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿ, ಕರ್ನಾಟಕ ನ್ಯಾಯಾಂಗ ಅಧಿಕಾರಿಗಳು, ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಿಗಮ ಮಂಡಳಿಗಳು, ಸಹಕಾರ ಸಂಸ್ಥೆಗಳ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಇತರೆ ಸಸ್ಥೆಗಳ ನೌಕರರು ಈ ಯೋಜನೆಯ ಲಾಭ ಪಡೆಯಲಿದ್ದಾರೆ.

ಈ ಯೋಜನೆಯಡಿ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ಮಕ್ಕಳು, ತಂದೆ ಮತ್ತು ತಾಯಿಗೆ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಜಾರಿಗೆ ತರುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಒಳಪಟ್ಟಿದೆ.

Exit mobile version