ಹೊಸ ಮನೆ ಕೊಳ್ಳುವುದೆಂದರೆ ದೀರ್ಘ ಪ್ರಕ್ರಿಯೆ. ನಿಮ್ಮ ಅಗತ್ಯ ಮತ್ತು ಬಜೆಟ್‌ಗೆ ತಕ್ಕಂತಹ ಮನೆಯನ್ನು ಹುಡುಕಿ ಒಪ್ಪಿಕೊಂಡ ನಂತರ ಕಾನೂನು ತೊಡಕುಗಳನ್ನು ಪರಿಶೀಲಿಸಬೇಕಾಗುತ್ತದೆ ಮತ್ತು ಖರೀದಿ ಪ್ರಕ್ರಿಯೆ ನಡೆಸಬೇಕಾಗುತ್ತದೆ. ಹೊಸ ಮನೆ ಅಥವಾ ಇನ್ನಾವುದೇ ಸ್ವತ್ತುಗಳನ್ನು ಖರೀದಿಸಲು ನಿಮಗೆ ಬೇಕಾಗುವ ಕಾಗದ ಪತ್ರಗಳ ಪಟ್ಟಿ ಇಲ್ಲಿದೆ ನೋಡಿ.
ಮಾರಾಟ ಕರಾರು
ಎಲ್ಲಕ್ಕಿಂತ ಮೊದಲು ಸ್ವತ್ತು/ಆಸ್ತಿ ವಹಿವಾಟಿನ ಸಂದರ್ಭದಲ್ಲಿ ಬೇಕಾಗುವುದು ಮಾರಾಟ ಮಾಡುವ ಕರಾರು. ಬೆಲೆ, ಮಾರಾಟಗಾರ ಮತ್ತು ಖರೀದಿದಾರ ಇಬ್ಬರೂ ವಹಿವಾಟಿಗಾಗಿ ಒಪ್ಪಿಕೊಂಡ ಷರತ್ತುಗಳು ಮತ್ತು ಆಸ್ತಿಯ ವಿಸ್ತ್ರತ ಮಾಹಿತಿ ಇದರಲ್ಲಿ ಅಡಕವಾಗಿರುತ್ತದೆ.
ಕ್ರಯಪತ್ರ
ಸ್ವತ್ತೊಂದರ ಮಾಲೀಕತ್ವವನ್ನು ಹಸ್ತಾಂತರಿಸುವ ಅಧಿಕೃತ ದಾಖಲೆ ಈ ಕ್ರಯಪತ್ರ. ಆಸ್ತಿ ಇರುವ ವ್ಯಾಪ್ತಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕ್ರಯಪತ್ರ (ಸೇಲ್ ಡೀಡ್/ ಟೈಟಲ್ ಡೀಡ್) ನೋಂದಣಿ ಮಾಡಿಸಿರಬೇಕು.
ಪವರ್ ಆಫ್ ಅಟಾರ್ನಿ
ಒಂದು ವೇಳೆ ಮೂಲ ಮಾಲೀಕರ ಪರವಾಗಿ ಬೇರೊಬ್ಬರು ಆಸ್ತಿಯನ್ನು ಮಾರಾಟ ಮಾಡುತ್ತಿರುವುದು ಎಂದಾದರೆ ಅಂಥ ಸಂದರ್ಭದಲ್ಲಿ ಆಸ್ತಿ ವಹಿವಾಟು ನಡೆಸಲು ಮೂಲ ಮಾಲೀಕರು ಆ ವ್ಯಕ್ತಿಗೆ ಅಧಿಕಾರ (ಪವರ್ ಆಫ್ ಅಟಾರ್ನಿ) ನೀಡಿದ್ದಾರೆ ಎಂಬುದನ್ನು ಖರೀದಿದಾರರು ಖಚಿತಪಡಿಸಿಕೊಳ್ಳಬೇಕು.
ಕಟ್ಟಡ ನಕ್ಷೆ
ಕಟ್ಟಡ ನಕ್ಷೆಯು, ಕಟ್ಟಡಕ್ಕೆ ಸ್ಥಳೀಯ ಆಡಳಿತ ನೀಡಿರುವ ಅನುಮೋದನೆಯ ಪ್ರಕಾರವೇ ಇದೆಯೇ ಅಥವಾ ಏನಾದರೂ ಉಲ್ಲಂಘನೆ ಉಂಟಾಗಿದೆಯೇ ಎಂಬುದನ್ನು ಖರೀದಿದಾರರಿಗೆ ತಿಳಿಸುತ್ತದೆ.
ಖಾತಾ ಪ್ರಮಾಣಪತ್ರ
ಖಾತಾ ಪ್ರಮಾಣಪತ್ರ ಎಂದರೆ ಸ್ಥಳೀಯ ನಗರಾಡಳಿತದ ದಾಖಲೆಗಳಲ್ಲಿ ಆಸ್ತಿಯ ನೋಂದಣಿ ಆಗಿದೆಯೇ ಎಂಬುದನ್ನು ಖಾತಾ ಪ್ರಮಾಣಪತ್ರ ಖಾತ್ರಿ ಪಡಿಸುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಲ್ಲಿ ಗುರುತಿಸಲಾಗುತ್ತದೆ. ಅಗತ್ಯ ಇರುವ ಎಲ್ಲ ಅನುಮೋದನೆಗಳನ್ನು ಪಡೆದಿದ್ದಲ್ಲಿ ಖಾತಾ ಪ್ರಮಾಣಪತ್ರ ನೀಡಲಾಗುತ್ತದೆ.
ಆಸ್ತಿ ತೆರಿಗೆ ರಸೀದಿ
ಆಸ್ತಿ ತೆರಿಗೆ ರಸೀದಿಯಲ್ಲಿ ತೆರಿಗೆ ಭರಿಸಿದ ಹಿಂದಿನ ಮಾಲೀಕರ ಮಾಹಿತಿ ಇರುತ್ತದೆ. ಆಸ್ತಿಗೆ ಸಂಬಂಧಿಸಿ ಯಾವುದೇ ತೆರಿಗೆ ಬಾಕಿ ಇಲ್ಲದಿದ್ದಲ್ಲಿ ಮಾತ್ರ ಈ ರಸೀದಿ ಸಿಗುತ್ತದೆ.
ಹೊಣೆಗಾರಿಕೆ ಪ್ರಮಾಣಪತ್ರ
ಆಸ್ತಿಯು ಯಾವುದೇ ಹೊಣೆಗಾರಿಕೆ ಅಥವಾ ಸಾಲವನ್ನು ಹೊಂದಿಲ್ಲ ಎಂಬುದನ್ನು ಈ ಪ್ರಮಾಣಪತ್ರ ಖಚಿತಪಡಿಸುತ್ತದೆ. ಆಸ್ತಿ ಪರಭಾರೆಗೆ ಸಂಬಂಧಿಸಿದ ಪ್ರತಿಯೊಂದೂ ಮಾಹಿತಿಯನ್ನು ಈ ದಾಖಲೆಯಲ್ಲಿ ಪಡೆಯಬಹುದು.
ಸ್ವಾಧೀನ ಪ್ರಮಾಣಪತ್ರ
ಅನುಭೋಗಕ್ಕೆ ನೀಡಲು ಕಟ್ಟಡ ಸಿದ್ಧಗೊಂಡಿದೆ ಮತ್ತು ಅನುಮೋದಿತ ಯೋಜನೆ ಪ್ರಕಾರ ಕಟ್ಟಡ ನಿರ್ಮಾಣಗೊಂಡಿದೆ ಎಂದು ಸ್ಥಳೀಯ ಆಡಳಿತಗಳು ಡೆವಲಪರ್‌ಗಳಿಗೆ ನೀಡುವ ದಾಖಲೆಯೇ ಸ್ವಾಧೀನ ಪ್ರಮಾಣಪತ್ರ.
ನಿರಾಕ್ಷೇಪಣಾ ಪತ್ರ (NOC)
ಪರಿಸರ ಇಲಾಖೆ, ಸಂಚಾರ ಮತ್ತು ಸಮನ್ವಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹೀಗೆ ವಿವಿಧ ಇಲಾಖೆಗಳಿಂದ ಕಟ್ಟಡ ನಿರ್ಮಾಣಕ್ಕೆ ಅಡ್ಡಿ ಇಲ್ಲ ಎಂಬುದಕ್ಕೆ ನಿರಾಕ್ಷೇಪಣಾ ಪತ್ರಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಕಟ್ಟಡ ನಿರ್ಮಾಣಕ್ಕೆ ಎಲ್ಲಕ್ಕಿಂತ ಮೊದಲು ಪಡೆಯಬೇಕಾದ ದಾಖಲೆಗಳು ಇವು.