Revenue Facts

ನಿಮ್ಮ ಮನೆಯನ್ನು ಸ್ನೇಹಶೀಲ ಮನೆಯನ್ನಾಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್‌

ನಿಮ್ಮ ಮನೆಯನ್ನು ಸ್ನೇಹಶೀಲ ಮನೆಯನ್ನಾಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್‌

ಬ್ರಿಟಿಷ್‌ ಅಥವಾ ಆಧುನಿಕ ಇಂಗ್ಲಿಷ್‌ ಫ್ಯಾಷನ್‌ ಎಂದರೆ ವಿಕೇಂದ್ರಿಯತೆ, ಬೆಚ್ಚನೆಯ ಭಾವ ಹಾಗೂ ನಾವೀನ್ಯತೆ. ನಾವು ವಾಸಿಸುವ ಮನೆ ಮುದ ನೀಡುವಂತಿರಬೇಕು ಎಂಬುದು ಎಲ್ಲರ ಬಯಕೆ. ಟೆಸರ್‌ ಡಿಸೈನ್ಸ್‌ನ ಸಹ ಸಂಸ್ಥಾಪಕಿಯಾಗಿರುವ ಸುಪ್ರಿಯಾ ಸುಬ್ರಹ್ಮಣಿಯನ್‌ ಅವರ ಪ್ರಕಾರ ʼಇಂಗ್ಲಿಷ್‌ ಮನೆಗಳು ಎಂದರೆ ಸರಳ, ಸಹಜ ವಿನ್ಯಾಸದ ಹಾಗೂ ಕಡಿಮೆ ಸ್ಥಳದಲ್ಲಿ ಅದ್ಭುತವಾಗಿ ನಿರ್ಮಿಸಬಲ್ಲಂಥ ವಿನ್ಯಾಸಗಳು. ಹಳೆಯ ಸೊಗಡಿನ ಮರದ ವಿನ್ಯಾಸ, ಹೊದಿಕೆ, ಬೆತ್ತ ಬಿದಿರುಗಳನ್ನು ಬಳಸಿಕೊಂಡೂ ನಿರ್ಮಿಸಬಹುದು. ವಿಶಿಷ್ಟವಾದ ವಾಸ್ತುವಿನ್ಯಾಸವನ್ನು ಬಳಸಿಕೊಂಡು ಬಾಗಿಲುಗಳ ಮೇಲೆ ಅಚ್ಚಿನ ಚಿತ್ರ, ವಿಭಿನ್ನ ಕಿಟಿಕಿ ವಿನ್ಯಾಸ, ಬಾಗಿಲು ಚೌಕಟ್ಟುಗಳ ವಿಶೇಷ ವಿನ್ಯಾಸ ಮನೆಗೆ ಇಂಗ್ಲಿಷ್‌ ಮನೆಗಳ ಲುಕ್‌ ನೀಡಬಲ್ಲವುʼ ಎಂಬುದು.

ಬ್ರಿಟಿಷ್‌ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಸಿಗುವ ಟ್ರಿಮ್ಸ್‌ ಹಾಗೂ ಮೋಲ್ಡಿಂಗ್‌ ವಿನ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇವುಗಳನ್ನು ವಿನ್ಯಾಸ ಮಾಡುವುದು ತಕ್ಕಮಟ್ಟಿಗೆ ಅಗ್ಗವಾಗಿದ್ದು ಕೋಣೆಗೆ ವಿಭಿನ್ನ ರೂಪವನ್ನು ನೀಡುವಲ್ಲಿ ಉತ್ತಮ ಆಯ್ಕೆಯಾಗಿದೆ. ವಿಭಿನ್ನ ಕಲಾಮಾಧ್ಯಮವನ್ನು ಇಲ್ಲಿ ಬಳಸಬಹುದು.

ಅವರವರ ಆಸಕ್ತಿಗನುಗುಣವಾಗಿ ಆಕರ್ಷಕ ದೀಪಗಳು, ವಾಲ್‌ಪೇಪರ್‌ಗಳು ಅಥವಾ ಟೆಕ್ಸ್‌ಚರ್‌ ಪೇಂಟ್‌ಗಳನ್ನು ಬಳಸಿ ಮನೆಯನ್ನು ಅಂದಗಾಣಿಸಬಹುದು. ಆಧುನಿಕ ಇಂಗ್ಲಿಷ್‌ ವಿನ್ಯಾಸದಲ್ಲಿ ಬಗೆಬಗೆಯ ರೊಮ್ಯಾಂಟಿಕ್‌ ಪ್ಯಾಟರ್ನ್‌ಗಳು, ಚಿಂಟ್ಸಿ (ಒತ್ತೊತ್ತಾದ ಆಕರ್ಷಕ ವಿನ್ಯಾಸ) ವಿನ್ಯಾಸಗಳು ಹಾಗೂ ಹೂವಿನ ಚಿತ್ರವಿರುವ ಪ್ರಿಂಟ್‌ಗಳನ್ನು ಬಳಸಿ ಮನೆಗೆ ಆಪ್ತ ಲುಕ್‌ ನೀಡಬಹುದು.

ಅಡುಗೆ ಮನೆಗೆ ಹೊಂದುವಂತೆ ʼಶೇಕರ್‌ ಸ್ಟೈಲ್‌ ಕ್ಯಾಬಿನೆಟ್‌ʼಗಳು ಆಧುನಿಕ ಇಂಗ್ಲಿಷ್‌ ಮನೆಗಳ ವೈಶಿಷ್ಟ್ಯ. ಜೊತೆಗೆ ಮನೆಯನ್ನು ಅಲಂಕರಿಸಲು ಪೇಂಟ್‌ಗಳನ್ನು ಯಥೇಚ್ಛವಾಗಿ ಹಾಗೂ ಕ್ರಿಯಾಶೀಲವಾಗಿ ಬಳಸಿಕೊಳ್ಳುವುದು ಇಂಗ್ಲಿಷ್‌ ಒಳಾಂಗಣ ವಿನ್ಯಾಸದಲ್ಲಿ ಸರ್ವೆಸಾಮಾನ್ಯ. ಬಾಗಿಲು, ಕಿಟಕಿ ಫ್ರೇಂಗಳು, ಕ್ಯಾಬಿನೆಟ್‌, ಪೀಠೋಪಕರಣಗಳನ್ನು ಪೇಂಟ್‌ ಮಾಡಿ ಮನೆಗೆ ವಿಶೇಷ ಲುಕ್‌ ನೀಡಲಾಗುತ್ತದೆ. ಪರಿಸರ ಸ್ನೇಹಿ, ಹಳೆ ಕಾಲದ ಪೀಠೋಪಕರಣಗಳನ್ನು ಬಳಸಿ ಮನೆಗೆ ಆಸಕ್ತಿದಾಯಕ ಲುಕ್‌ ನೀಡಬಹುದು. ಮನೆ ತುಂಬ ನೈಸರ್ಗಿಕ ಬೆಳಕು ಸಿಗುವಂತೆ ಮಾಡಲು ದೊಡ್ಡದಾದ ಕಿಟಕಿ, ಗೋಡೆಯ ಅಲ್ಲಲ್ಲಿ ಲ್ಯಾಂಪ್‌ಗಳು, ಟೇಬಲ್‌ ಲ್ಯಾಂಪ್‌, ಫ್ಲೋರ್‌ ಲ್ಯಾಂಪ್‌ಗಳ ಬೆಳಕು ಇರಲಿದ್ದು ಮನೆಯ ಒಳಗೆ ಮೃದುವಾದ ಆಹ್ಲಾದವಾದ ವಾತಾವರಣ ಇರುವಂತೆ ನೋಡಿಕೊಳ್ಳಲಾಗುತ್ತದೆ.

ಮ್ಯಾಸನ್‌ ಹೋಮ್ಸ್‌ನ ಸಂಸ್ಥಾಪಕರಾದ ಚಿರಾಗ್‌ ವೋರಾ, ಮನೆಗೆ ಇಂಗ್ಲಿಷ್‌ ಮನೆಗಳಂತೆ ಲುಕ್‌ ನೀಡುವ ಕುರಿತು ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ.

* ಮನೆಯ ಒಳಾಂಗಣದಲ್ಲಿ ಅಲಂಕರಿಸುವ ವಸ್ತುಗಳು ಅತ್ಯುತ್ಕೃಷ್ಟವಾದ ಹಾಗೂ ಮಹತ್ವಪೂರ್ಣವಾದವುಗಳಾಗಿರಬೇಕು. ನೋಡುತ್ತಿದ್ದಂತೆ ಮನಸ್ಸಿಗೆ ಮುದ ನೀಡುವಂತಿರಬೇಕು. ಅವು ಕುಶನ್‌, ಪ್ಲಾಂಟರ್ಸ್‌, ಟೇಬಲ್‌ಗಳು ಯಾವುದೇ ಆಗಿರಬಹುದು, ನೋಡುತ್ತಿದ್ದಂತೆ ವಿಶೇಷ ನೆನಪುಗಳನ್ನು ಹುಟ್ಟುಹಾಕುವಂತಿರಬೇಕು.

* ಕ್ಲಾಸಿಕ್‌ ಪಾಟ್‌ಗಳು ಅಥವಾ ಪ್ಲಾಂಟರ್‌ಗಳು, ಪ್ರಾಣಿಗಳ ಚಿತ್ರ, ಸಾಂಪ್ರದಾಯಿಕ ವಸ್ತುಗಳನ್ನು ಇಟ್ಟು ಕಾಫಿ ಟೇಬಲ್‌ ಅನ್ನು ವಿಭಿನ್ನವಾಗಿ ಅಲಂಕರಿಸಬಹುದು.

* ವೈಭವೋಪೇತವಾಗಿರುವುದು ಇಂಗ್ಲಿಷ್‌ ಮನೆಗಳ ಮುಖ್ಯ ಲಕ್ಷಣ. ಕೋಣೆಯಲ್ಲಿ ಅಥವಾ ಹಾಲ್‌ನಲ್ಲಿ ಕುಸುರಿ ಕೆಲಸವಿರುವ ಕ್ಯಾಂಡಲ್‌ ಸ್ಟ್ಯಾಂಡ್‌ಗಳನ್ನು ಅಥವಾ ಇನ್ನಿತರೆ ಕರಕುಶಲ ವಸ್ತುಗಳನ್ನು ಇಟ್ಟು ಮನೆಗೆ ವಿಕ್ಟೋರಿಯನ್‌ ಕಳೆ ಕೊಡಲು ಮರೆಯದಿರಿ.

* ಲಿವಿಂಗ್‌ ರೂಮ್‌ ಅಥವಾ ಹಾಲ್‌ನ ಮೂಲೆಯನ್ನು ಗಿಡಗಳಿಂದ, ಆಕರ್ಷಕ ದೀಪಗಳಿಂದ ಅಲಂಕರಿಸಿ ಚೆಂದಗಾಣಿಸಿ. ಇದರಿಂದ ಯಾರೇ ಮನೆಗೆ ಬರಲಿ ಅಲ್ಲೊಂದು ಸ್ನೇಹಮಯ ಹಾಗೂ ಆಹ್ಲಾದಕರ ಭಾವ ಮೂಡುತ್ತದೆ.

* ಪಿಲ್ಲೊ ಕವರ್‌ನಲ್ಲಿರಲಿ, ಹಾಸಿಗೆ ಬಟ್ಟೆಗಳಲ್ಲಿರಲಿ ಅಥವಾ ವಾಲ್‌ ಪೇಪರ್‌ಗಳಲ್ಲಿರಲಿ ಸುಂದರವಾದ ಫ್ಲೋರಲ್‌ ವಿನ್ಯಾಸವಿರುವಂತೆ ನೋಡಿಕೊಳ್ಳಿ. ಇದು ಮನೆಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

Exit mobile version