Revenue Facts

ಆರ್ಥಿಕ ಸಮೀಕ್ಷೆ 2023: ಮುಂದಿನ ವರ್ಷ ಯಾವೆಲ್ಲಾ ಬೆಲೆಗಳು ಏರಿಕೆಯಾಗಬಹುದು..?

ಆರ್ಥಿಕ ಸಮೀಕ್ಷೆ 2023:  ಮುಂದಿನ ವರ್ಷ ಯಾವೆಲ್ಲಾ ಬೆಲೆಗಳು ಏರಿಕೆಯಾಗಬಹುದು..?

ಬೆಂಗಳೂರು, ಜ. 31 : ಕೇಂದ್ರ ಬಜೆಟ್ ಅಧಿವೇಶನ ಅದಾಗಲೇ ಆರಂಭವಾಗಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಸಂಸತ್‌ ನಲ್ಲಿ ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯ ಮೂಲಕವೇ ಮುಂದಿನ ವರ್ಷದ ಗುರಿಗಳನ್ನ್ನು ನಿಗದಿಪಡಿಸಲಾಗುತ್ತದೆ. 2022-23ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಸಂಘರ್ಷದ ಜಾಗತಿಕ ಆಘಾತಗಳು, ಸರಕುಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿದೆ. ಭಾರತದ ಬೆಳವಣಿಗೆಯ ದೃಷ್ಟಿಕೋನವು ಸಾಂಕ್ರಾಮಿಕ ಪೂರ್ವದ ವರ್ಷಗಳಿಗಿಂತ ಉತ್ತಮವಾಗಿದೆ. ಮುಂದಿನ ದಶಕದಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲಿದೆ ಎಂದು ಸಂಸತ್‌ ನಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಮುಂದಿನ ಹಣಕಾಸು ವರ್ಷದಲ್ಲಿ ಪೂರೈಕೆಯ ಕೊರತೆಯ ಕಾರಣದಿಂದಾಗಿ ಸಿರಿಧಾನ್ಯಗಳು ಮತ್ತು ಸಾಂಬಾರ ಪದಾರ್ಥಗಳ ದೇಶೀಯ ಬೆಲೆಗಳನ್ನು ಕೆಲವೇ ಸಮಯಗಳಲ್ಲಿ ಹೆಚ್ಚಿಸಬಹುದು ಎಂದು ಆರ್‌ ಬಿಐ ಮುನ್ಸೂಚನೆ ನೀಡಿದೆ. ಹಾಲು, ಧಾನ್ಯ, ಆಹಾರ ಪದಾರ್ಥಗಳ ಬೆಲೆಗಳು ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. ಸಾಮಾನ್ಯವಾಗಿ, ಪ್ರಪಂಚದಾದ್ಯಂತ ಹವಾಮಾನವು ಹೆಚ್ಚು ಅನಿಯಮಿತವಾಗಿದೆ. ಇದು ಆಹಾರದ ಬೆಲೆಗಳಿಗೆ ಮತ್ತಷ್ಟು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಆರ್ಥಿಕ ಸಮೀಕ್ಷೆ 2023 ಹೇಳಿದೆ. ಇದರ ಜೊತೆಗೆ ದೇಶದ 46 ನಗರಗಳಲ್ಲಿ ಮನೆಗಳ ಮೇಲಿನ ಬೆಲೆಯೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಗಾದರೆ ಬನ್ನಿ ಆರ್ಥಿಕ ಸಮೀಕ್ಷೆ ಪ್ರಕಾರ ಯಾವುದರ ಬೆಲೆಗಳು ಹೆಚ್ಚಾಗಲಿದೆ ಎಂದು ತಿಳಿಯೋಣ.

ಭಾರತದ ಆರ್ಥಿಕತೆ: ಜಗತ್ತಿನಲ್ಲಿ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಆರ್ಥಿಕತೆ ಅತೀವೇಗವಾಗಿ ಅಭುವೃದ್ಧೀ ಹೊಂದುತ್ತಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 6.8% ಹಣದುಬ್ಬರವು ಖಾಸಗಿ ಬಳಕೆಯನ್ನು ತಡೆಯುವಷ್ಟು ಹೆಚ್ಚಿಲ್ಲ ಅಥವಾ ಹೂಡಿಕೆಯನ್ನು ದುರ್ಬಲಗೊಳಿಸುವಷ್ಟು ಕಡಿಮೆಯಾಗಿದೆ. ಎರವಲು ವೆಚ್ಚವು ದೀರ್ಘಾವಧಿಯವರೆಗೆ ಅಧಿಕ ಉಳಿಯಬಹುದು. ಭದ್ರವಾದ ಹಣದುಬ್ಬರವು ಬಿಗಿಗೊಳಿಸುವ ಚಕ್ರವನ್ನು ವಿಸ್ತರಿಸಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳುತ್ತದೆ.

ರೂಪಾಯಿ ಮೇಲೆ ಒತ್ತಡ ಸಾಧ್ಯತೆ: ಆರ್ಥಿಕತೆ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಚಾಲ್ತಿಯಲ್ಲಿರುವ ಖಾತೆ ಬ್ಯಾಲೆನ್ಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಸ್ತುಗಳ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆಯನ್ನು ಕಾಣುತ್ತಿವೆ. ಸರಕುಗಳ ಬೆಲೆ ಹೆಚ್ಚಳದ ನಡುವೆಯೂ ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಾಗಿರುವ ಕಾರಣ ಭಾರತ ಬೇರೆ ರಾಷ್ಟ್ರಗಳಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ಅಗತ್ಯ. ಇದು ಚಾಲ್ತಿ ಖಾತೆ ಬ್ಯಾಲೆನ್ಸ್ ಕೊರತೆ ಉಂಟಾಗಿ ರೂಪಾಯಿ ಮೌಲ್ಯ ಕುಸಿಯಬಹುದು. ಇನ್ನು ಇದರೊಂದಿಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ಬ್ಯಾಂಕ್ ಬಡ್ಡಿದರವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

ಗೃಹಗಳ ಬೆಲೆ ಏರಿಕೆ: ಕೋವಿಡ್-‌19 ಸಾಂಕ್ರಾಮಿಕ ರೋಗ ಆವರಿಸಿದಾಗ ಇಡೀ ಜಗತ್ತು ತತ್ತರಿಸಿತ್ತು. ಇದರಿಂದ ಇನ್ನೂ ಹಲವು ರಾಷ್ಟ್ರಗಳು ಚೇತರಿಕೆಯ ಹಾದಿಯಲ್ಲಿವೆ. ಆದರೆ, ಭಾರತ ಬಹುಬೇಗನೆ ಚೇತರಿಕೆಯನ್ನು ಕಂಡಿದ್ದು, ಕೋವಿಡ್-‌19 ರಿಯಲ್‌ ಎಸ್ಟೇಟ್‌ ಮೇಲೆ ಭಾರೀ ಪರಿಣಾಮವನ್ನು ಬೀರಿತ್ತು. ಇದರಿಂದ ದೇಶದ 50 ನಗರಗಳ ಪೈಕಿ 46 ನಗರಗಳಲ್ಲಿ ಭೂಮಿ ಬೆಲೆ ಹೆಚ್ಚಳವಾಗಿದೆ. ಉಳಿದ ನಾಲ್ಕು ನಗರಗಳಲ್ಲಿ ಬೆಲೆ ಇಳಿಕೆ ಕಂಡಿದೆ. ಆರ್ಥಿಕ ಸಮೀಕ್ಷೆ 2023ರ ಪ್ರಕಾರ ಎಲ್ಲ ಪ್ರಮುಖ ಎಂಟು ನಗರಗಳಲ್ಲಿ ಗೃಹ ಬೆಲೆ ಸೂಚ್ಯಂಕದಲ್ಲಿ ವಾರ್ಷಿಕ ಏರಿಕೆಯಾಗಿದೆ.

Exit mobile version