Revenue Facts

ಅಲೆಮಾರಿಗಳಿಗೆ ಪ್ರತ್ಯೇಕ ಆಯೋಗಕ್ಕೆ ಮನವಿ

ಬೆಂಗಳೂರು, ಜೂನ್ 12: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಅಲೆಮಾರಿ ಬುಡಕಟ್ಟುಗಳ ಮಹಾಸಭಾದ ಅಧ್ಯಕ್ಷರೂ ಆದ ಡಾ:ಸಿ.ಎಸ್.ದ್ವಾರಕಾನಾಥ್ ಅವರ ನೇತೃತ್ವದಲ್ಲಿ ಅಲೆಮಾರಿ ಸಮುದಾಯಗಳ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚಿಸಿತು.

ಈ ಸಂದರ್ಭದಲ್ಲಿ ಎಲ್ಲಾ ಅಲೆಮಾರಿ ಸಮುದಾಯಗಳ ಸಂಕಷ್ಟಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಅಲೆಮಾರಿಗಳಿಗೆ ಪ್ರತ್ಯೇಕ ಆಯೋಗ ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು ಎಂದರು.

ಇಂದಿಗೂ ಹಾವಾಡಿಸುವ ಮೂಲಕ ಜೀವನ ನಡೆಸುವ ಹಾವಾಡಿಗ ಸಮುದಾಯದವರಿಗೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವಂತೆ ಕಿವಿ ಮಾತು ಹೇಳಿದರು. ಸರ್ಕಾರ ಜುಲೈ ಒಂದರಿಂದ ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ದೊರೆಯಲಿದೆ. ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

ನಿಯೋಗದ ಇನ್ನಿತರ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ನಿಯೋಗದಲ್ಲಿ ಸುಡುಗಾಡು ಸಿದ್ಧರು, ದೊಂಬಿದಾಸ, ದಕ್ಕಲಿಗ, ಹಂದಿಜೋಗಿ, ಕೊಲೆಬಸವ, ಹಕ್ಕಿಪಿಕ್ಕಿ, ಕರಡಿ ಕಲಂಧರ್, ಪಿಂಜಾರ/ ನದಾಫ್, ಸೋಲಿಗ, ಜೇನು ಕುರುಬ, ಗ್ಯಾರೆ, ಕೊರವ, ಬೇಡ ಗಂಪಣ, ಗೆಜ್ಜೆಗಾರ, ಬುಡ್ಗ ಜಂಗಮ, ಕಾಡುಗೊಲ್ಲ, ಹಲಾಲ್ ಖೋರ್ ಸಮುದಾಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Exit mobile version