Revenue Facts

ಬಾಡಿಗೆ ಮನೆಗೆ 2 ತಿಂಗಳ ಹಣ ಮಾತ್ರ ಅಡ್ವಾನ್ಸ್ ಆಗಿ ಪಡೆಯಬೇಕು: ಮಾದರಿ ಬಾಡಿಗೆ ಕಾಯ್ದೆ ಕುರಿತ ಒಂದಿಷ್ಟು ಮಾಹಿತಿ

House Lease

House Lease

ಕಾನೂನಿನ ಅಡಿಯಲ್ಲಿ ಸರಿಯಾದ ದಾಖಲೆಗಳ ನಿರ್ವಹಣೆ ಜೊತೆಗೆ ಎಲ್ಲಾ ವರ್ಗದ ಜನರಿಗೆ ಅನುಕೂಲ ಹಾಗೂ ಬಾಡಿಗೆದಾರರ ಹಿತರಕ್ಷಣೆ ಕಾಯ್ದುಕೊಳ್ಳುವ ಸಲುವಾಗಿ ಮಾದರಿ ಬಾಡಿಗೆ ಕಾಯ್ದೆಯನ್ನು ಸರ್ಕಾರವು ಆಳವಡಿಸಿಕೊಳ್ಳಲು ಮುಂದಾಗಿದೆ. ಹೆಚ್ಚುತ್ತಿರುವ ವಸತಿ ಬೇಡಿಕೆ ಅಗತ್ಯಗಳನ್ನು ಸಮರ್ಪಕವಾಗಿ ಪೂರೈಸುವ ಸಲುವಾಗಿ ಈ ಹೊಸ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಈ ಕಾಯ್ದೆ ಪ್ರಕಾರ, ಮನೆ ಮಾಲೀಕ ಹಾಗೂ ಬಾಡಿಗೆದಾರರ ನಡುವೆ ಸಣ್ಣ ಪುಟ್ಟ ಮನಸ್ತಾಪಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಎಲ್ಲಾ ಹೊಸ ಮನೆ ಗುತ್ತಿಗೆಯನ್ನು ಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. ಅದನ್ನು ಸಂಬಂಧಿತ ಜಿಲ್ಲೆಯ ‘ಬಾಡಿಗೆ ಪ್ರಾಧಿಕಾರಕ್ಕೆ’ ಸಲ್ಲಿಸಬೇಕು. ಬಾಡಿಗೆ ಹಾಗೂ ಬಾಡಿಗೆಯ ಅವಧಿಯನ್ನು ಮಾಲೀಕರು ಹಾಗೂ ಬಾಡಿಗೆದಾರರು ತಮ್ಮ ನಡುವೆ ಪರಸ್ಪರ ಒಪ್ಪಂದದ ಮೂಲಕ ಲಿಖಿತ ರೂಪದಲ್ಲಿ ನಿರ್ಧರಿಸಬೇಕು. ಇನ್ನು ಮನೆ ಮಾಲೀಕರು ಮಾರುಕಟ್ಟೆ ಬೆಲೆಗೆ ತಕ್ಕಂತೆ ತಮ್ಮ ಆಸ್ತಿಗೆ ಬಾಡಿಗೆ ಹೆಚ್ಚಿಸುವುದಿದ್ದಲ್ಲಿ ಬಾಡಿಗೆದಾರರಿಗೆ ಮೂರು ತಿಂಗಳ ಮುಂಚೆಯೇ ನೋಟಿಸ್‌ ನೀಡಬೇಕು. ಹಾಗೇ ಬಾಡಿಗೆದಾರರಿಗೆ ವ್ಯವಸ್ಥೆ ಮಾಡಿಕೊಳ್ಳಲು ಸಾಕಷ್ಟು ಸಮಯ ನೀಡಬೇಕು ಎಂದು ಹೇಳಿದೆ.

ಆರಂಭದಲ್ಲಿ ಮನೆ ಮಾಲೀಕರು ದೊಡ್ಡ ಮೊತ್ತವನ್ನು ಸೆಕ್ಯುರಿಟಿ ಡೆಪಾಸಿಟ್‌ ಆಗಿ ಪಡೆದುಕೊಳ್ಳುತ್ತಾರೆ. ಈಗ 10 ಅಥವಾ 12 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಮನೆ ಮಾಲೀಕರು ಪಡೆದುಕೊಳ್ಳುತ್ತಿದ್ದಾರೆ. ಇದು ಮುಂಬೈ ಹಾಗೂ ಬೆಂಗಳೂರಿನಂತಹ ಮೆಟ್ರೊ ಪಾಲಿಟನ್‌ ಸಿಟಿಗಳಲ್ಲಿ ಸಾಮಾನ್ಯ. ಆದರೆ ಈ ಕಾಯ್ದೆ ಪ್ರಕಾರ, ಕೇವಲ ಎರಡು ತಿಂಗಳ ಬಾಡಿಗೆ ಹಣವನ್ನು ಮುಂಗಡವಾಗಿ ಪಡೆಯಬಹುದು. ಕಾಯ್ದೆ ಪ್ರಕಾರ, ಬಾಡಿಗೆದಾರರು ಒಪ್ಪಂದದಂತೆ ನಿಗದಿತ ಸಮಯಕ್ಕೆ ಮನೆ ತೊರೆಯದಿದ್ದಲ್ಲಿ ಆರಂಭದಲ್ಲಿ ಎರಡು ತಿಂಗಳು ಎರಡು ಪಟ್ಟು ಹೆಚ್ಚು ಬಾಡಿಗೆ ಪಾವತಿಸಬೇಕು ಹಾಗೂ ನಂತರ ನಾಲ್ಕು ಪಟ್ಟು ಹೆಚ್ಚು ಬಾಡಿಗೆ ಒದಗಿಸಬೇಕು.

ಒಂದು ವೇಳೆ ಮನೆ ಮಾಲೀಕನು ಬಾಡಿಗೆದಾರನಿಗೆ ನಿಗದಿತ ಸಮಯದಲ್ಲಿ ಮುಂಗಡ ಹಣವನ್ನು ವಾಪಸು ಮಾಡಲು ವಿಫಲನಾದರೆ, ಆ ಅವಧಿಯಲ್ಲಿ ಕಾಲಕಾಲಕ್ಕೆ ಅವನು ಆ ಮೊತ್ತದ ಬಡ್ಡಿಯನ್ನು ಬಾಡಿಗೆದಾರನಿಗೆ ಪಾವತಿಸಬೇಕು ಎಂದು ಕಾಯ್ದೆಯಲ್ಲಿದೆ.

ಒಂದು ವೇಳೆ ಮಾಲೀಕ ಹಾಗೂ ಬಾಡಿಗೆದಾರನ ಮಧ್ಯೆ ಭಿನ್ನಾಭಿಪ್ರಾಯ ಉಂಟಾದಲ್ಲಿ ಮೊದಲು ಅವರು ‘ಬಾಡಿಗೆ ಆಥಾರಿಟಿ’ಯನ್ನು ಸಂಪರ್ಕಿಸಬೇಕು. ಬಾಡಿಗೆ ಆಥಾರಿಟಿ ತೀರ್ಮಾನದಿಂದ ಅಸಮಾಧಾನವಿದ್ದಲ್ಲಿ ‘ರೆಂಟ್‌ ಕೋರ್ಟ್‌’ಗೆ ಮೇಲ್ಮನವಿ ಸಲ್ಲಿಸಬಹುದು. ಇಲ್ಲಿಯೂ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಆ ಪ್ರಕರಣವನ್ನು ಬಾಡಿಗೆ ನ್ಯಾಯಮಂಡಳಿಗೆ ಕೊಂಡೊಯ್ಯಲಾಗುತ್ತದೆ.

ಭಿನ್ನಾಭಿಪ್ರಾಯ ಅಥವಾ ಪ್ರಕರಣ, ನ್ಯಾಯಾಲಯ ಅಥವಾ ನ್ಯಾಯಮಂಡಳಿಯಲ್ಲಿ ಇದ್ದಾಗ ಮನೆ ಮಾಲೀಕರು ಬಾಡಿಗೆದಾರರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ತಡೆ ಮಾಡುವಂತಿಲ್ಲ. ಹಾಗೇ ಬಾಡಿಗೆ ಕೊಟ್ಟಿರುವ ಮನೆ ಅಥವಾ ಸುತ್ತಮುತ್ತ ಯಾವುದೇ ದುರಸ್ತಿ ಕಾರ್ಯಗಳನ್ನು ಮಾಡುವಾಗ, ನೀರು ಅಥವಾ ಅಗತ್ಯ ವಸ್ತುಗಳ ಪೂರೈಕೆ ಅಥವಾ ಓಡಾಟಕ್ಕೆ ಅನಾನುಕೂಲ ಉಂಟಾಗುತ್ತಿದ್ದಲ್ಲಿ ಬಾಡಿಗೆದಾರರಿಗೆ 24 ಗಂಟೆಗಳ ಮೊದಲು ಮಾಲೀಕ ತಿಳಿಸಿರಬೇಕು ಎಂದು ಹೊಸ ಕಾನೂನು ಸ್ಪಷ್ಟಪಡಿಸಿದೆ.

ಈ ಕಾಯ್ದೆ ಪ್ರಕಾರ ಬಾಡಿಗೆ ಒಪ್ಪಂದದ ಅವಧಿ ಮುಗಿಯುವವರೆಗೂ ಬಾಡಿಗೆದಾರರನ್ನು ಮನೆಯಿಂದ ಹೊರ ಹಾಕುವಂತಿಲ್ಲ. ಹಾಗೇ ಬಾಡಿಗೆದಾರರಿಂದ ಆದ ಹಾನಿ ಹೊರತುಪಡಿಸಿ ಗೋಡೆಗೆ ಸುಣ್ಣ, ಬಾಗಿಲು, ಕಿಟಕಿಗಳಿಗೆ ಪೇಟಿಂಗ್‌, ಪೈಪ್‌ ರಿಪೇರಿ, ಬದಲಾವಣೆ, ಎಲೆಕ್ಟ್ರಿಕಲ್‌ ವೈರಿಂಗ್‌, ನಿರ್ವಹಣೆ ಮೊದಲಾದ ಜವಾಬ್ದಾರಿ ಮನೆ ಮಾಲೀಕನದ್ದೇ ಆಗಿರುತ್ತದೆ ಎಂದು ಕಾಯ್ದೆಯಲ್ಲಿ ತಿಳಿಸಲಾಗಿದೆ.

ಹಾಗೇ ಬಾಡಿಗೆದಾರರು ಕೂಡ ಕೊಳವೆ ರಿಪೇರಿ, ಸ್ವಿಚ್ ಮತ್ತು ಸಾಕೆಟ್ ರಿಪೇರಿ, ಕಿಚನ್ ಸಿಂಕ್‌, ಪೈಪ್‌ ರಿಪೇರಿ, ಕಿಟಕಿಗಳು ಮತ್ತು ಬಾಗಿಲುಗಳಲ್ಲಿ ಗಾಜಿನ ಫಲಕಗಳನ್ನು ಬದಲಾಯಿಸುವುದು ಮತ್ತು ಉದ್ಯಾನ ಮತ್ತು ಮನೆ ಮುಂದಿನ ಜಾಗವನ್ನು ಚೊಕ್ಕವಾಗಿಟ್ಟುಕೊಳ್ಳುವುದು, ಇತರ ವಿಷಯಗಳ ಬಗ್ಗೆಯೂ ಜವಾಬ್ದಾರಿ ಹೊಂದಿರಬೇಕು ಎಂದಿದೆ. ಮನೆ ಮಾಲೀಕರ ಲಿಖಿತ ಒಪ್ಪಂದ ಇಲ್ಲದೇ ಮನೆ ವಿನ್ಯಾಸ ಹಾಗೂ ಆವರಣದಲ್ಲಿ ಯಾವುದೇ ಬದಲಾವಣೆ ಅಥವಾ ಕಾಮಗಾರಿ ಬಾಡಿಗೆದಾರರು ನಡೆಸುವಂತಿಲ್ಲ.

ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಈ ಕಾಯ್ದೆ ಪರಿಣಾಮ

ಈ ಕಾಯ್ದೆ ಅನುಷ್ಠಾನಗೊಂಡರೆ ರಿಯಲ್‌ ಎಸ್ಟೇಟ್‌ ಉದ್ಯಮದ ನಿಶ್ಚಲತೆಗೆ ಪರಿಹಾರ ದೊರಕಲಿದ್ದು, ಮಾಲೀಕರು, ಬಾಡಿಗೆದಾರರಿಗೆ ದ ಜೊತೆಗೆ ಸ್ಪಷ್ಟತೆಯೂ ಸಿಗಲಿದೆ. ಈ ಮೊದಲು ಒಪ್ಪಂದ ಅವಧಿ ಮುಗಿದ ನಂತರವೂ ಬಾಡಿಗೆದಾರರು ಬಾಡಿಗೆ ಆವರಣದಲ್ಲಿ ಠಿಕಾಣಿ ಹೂಡಿದರೆ ಯಾವುದೇ ಸ್ಪಷ್ಟವಾದ ಪರಿಹಾರವಿರಲಿಲ್ಲ. ಭೂಮಾಲೀಕ-ಬಾಡಿಗೆದಾರರ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿಭಾಯಿಸಲು ರೆಂಟ್‌ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಮೂಲಕ ಈ ಸಮಸ್ಯೆಗೆ ಉತ್ತರವನ್ನು ನೀಡಿದೆ. ಇದು ವಸತಿ ಉದ್ಯಮಕ್ಕೆ ಮಹತ್ವದ ಹೆಜ್ಜೆ. ಎಲ್ಲಾ ರೀತಿಯ ಆದಾಯದ ಜನರಿಗೆ ಆದ್ಯತೆಯಲ್ಲಿ ಬಾಡಿಗೆ ವಸತಿ ಲಭ್ಯವಾಗುವಂತೆ ಈ ಕಾಯ್ದೆ ಮಾಡುವುದು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಮಹತ್ವದ್ದಾಗಿದೆ.

Exit mobile version